ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತದ ಕೆಳಮಟ್ಟದ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಯೋಜನೆ ಜಾರಿಗೆ ತಂದಿದೆ. ಇದರಿಂದ ಭಾರತವನ್ನು ಶ್ರೇಷ್ಠ ಕ್ರೀಡಾರಾಷ್ಟ್ರವಾಗಿ ರೂಪಿಸಲು ಸಹಕಾರಿಯಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ ವಿಶ್ವಾಸದಿಂದ ನುಡಿದರು.ತಾಲೂಕಿನ ವಿ.ಸಿ.ಫಾರಂನಲ್ಲಿ ೧೪ ಕೋಟಿ ರು. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕ್ರೀಡಾಪಟುಗಳು ತರಬೇತಿ ಹಾಗೂ ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದರು. ಕಳೆದ ೧೧ ವರ್ಷಗಳಲ್ಲಿ ಕ್ರೀಡಾಪಟುಗಳಿಗೆ ಅತ್ಯಾಧುನಿಕ ಕ್ರೀಡಾ ಸೌಲಭ್ಯ, ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡುವ ಮೂಲಕ ಹೆಚ್ಚು ಹೆಚ್ಚು ಪದಕಗಳನ್ನು ಗೆಲ್ಲುವುದಕ್ಕೆ ಸಹಕಾರಿಯಾಗಿದೆ ಎಂದರು.
೨೦೧೬ರಲ್ಲಿ ಖೇಲೋ ಇಂಡಿಯಾ ಆರಂಭವಾದ ಬಳಿಕ ಇಡೀ ರಾಷ್ಟ್ರದಲ್ಲಿ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ. ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಕ್ರೀಡಾ ಚಟುವಟಿಕೆಗಳು ಪ್ರತಿ ಹಳ್ಳಿ ಮತ್ತು ಶಾಲೆಗಳಲ್ಲೂ ಆರಂಭಗೊಂಡಿವೆ. ಗ್ರಾಮೀಣ ಭಾಗದಿಂದಲೂ ಉತ್ತಮ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರುವಂತಾಗಿದೆ. ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್, ಒಲಂಪಿಕ್ಸ್ ಕ್ರೀಡಾಕೂಟದಲ್ಲೂ ಕ್ರೀಡಾಪಟುಗಳು ಚಿನ್ನ ಸೇರಿದಂತೆ ಹಲವು ಪದಕಗಳನ್ನು ಗೆಲ್ಲುವಂತಾಗಿದೆ ಎಂದರು.ಮಂಡ್ಯ ನೆಲದಿಂದ ರಾಜ್ಯವಷ್ಟೇ ಅಲ್ಲ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾಪಟುಗಳು ಬಂದಿದ್ದಾರೆ. ಆ ಪೈಕಿ ನಾನು ಅಥ್ಲೆಟಿಕ್ಸ್‌ನಲ್ಲಿ ವಿಕಾಸಗೌಡ ಹಾಗೂ ವ್ಹೀಲ್ ಚೇರ್ ಟೆನ್ನಿಸ್ ಆಟಗಾರ್ತಿ ಕೆ.ಆರ್. ಶಿಲ್ಪಾ ಅವರನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಇಂತಹ ಅನೇಕ ಕ್ರೀಡಾಪಟುಗಳು ಮಂಡ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರು ಭಾರತದ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಬೆಳಗುತ್ತಿದ್ದಾರೆ. ಇಲ್ಲಿ ನಿರ್ಮಾಣವಾಗಲಿರುವ ಒಳಾಂಗಣ ಕ್ರೀಡಾಂಗಣದ ಸದುಪಯೋಗ ಪಡೆದುಕೊಂಡು ಇಂತಹ ಅಸಂಖ್ಯಾತ ಪ್ರತಿಭೆಗಳು ಇಲ್ಲಿಂದ ಹೊರಬರಬೇಕು ಎಂದು ಹಾರೈಸುತ್ತೇನೆ ಎಂದು ಆಶಿಸಿದರು.
ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಕಳೆದ ಬಜೆಟ್‌ನಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ೪ ಸಾವಿರ ಕೋಟಿ ರು. ಹಂಚಿಕೆ ಮಾಡಿದೆ. ಹತ್ತು ವರ್ಷಗಳ ಹಿಂದೆ ಈ ಉದ್ದೇಶಕ್ಕೆ ಕೇವಲ ೧೨೦೦ ಕೋಟಿ ರು. ಮಾತ್ರ ಕೊಡಲಾಗುತ್ತಿತ್ತು. ಅದರ ಪ್ರಮಾಣ ಈಗ ಮೂರೂವರೆ ಪಟ್ಟು ಹೆಚ್ಚಾಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು ಎಂದರು.
ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಹಾಗೂ ಎನ್‌ಡಿಎ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಪರಿಶ್ರಮದಿಂದ ಮಂಡ್ಯದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಕುಮಾರಸ್ವಾಮಿ ಅವರೇ, ಜನರಿಗಾಗಿ ನೀವು ಮಾಡಿರುವ ಕೆಲಸವು ಜನರು ನಿಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಯಲ್ಲಿಯೇ ಕಾಣುತ್ತಿದೆ ಎಂದು ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಹೇಳಿದರು.
ವಿಶೇಷಚೇತನರ ಬಗ್ಗೆ ನೀವು ಹೊಂದಿರುವ ಮಮತೆ, ಬದ್ಧತೆಯನ್ನು ನಾನು ಕಣ್ಣಾರೆ ನೋಡುತ್ತಿದ್ದೇನೆ. ನನಗೆ ಬಹಳ ಸಂತೋಷ ಉಂಟು ಮಾಡಿದೆ. ನೀವು ಮಾಡುತ್ತಿರುವ ಈ ಕೆಲಸ ಶ್ಲಾಘನಾರ್ಹ. ನೀವು ಎಲೆಕ್ಟ್ರಿಕ್ ವಾಹನಗಳನ್ನು ನೀಡುವ ಮೂಲಕ ವಿಕಲಚೇತನರಿಗೆ ಮಾತ್ರ ಸಹಾಯ ಮಾಡುತ್ತಿಲ್ಲ, ಪರಿಸರಕ್ಕೆ ಕೂಡ ಒಳ್ಳೆಯದು ಮಾಡುತ್ತಿದ್ದೀರಿ ಎಂದು ಮಾಂಡವೀಯ ಅವರು ಶ್ಲಾಘಿಸಿದರು.‘ಖೇಲೋ ಇಂಡಿಯಾ! ವೈಬ್ರೆಂಟ್ ಮಂಡ್ಯ’ ನಿನಾದಕ್ಕೆ ಪೂರಕವಾಗಿ ಮಂಡ್ಯ ಜಿಲ್ಲೆಯಲ್ಲಿ ಕ್ರೀಡೆಯು ಉಜ್ವಲವಾಗಿ ಬೆಳೆದು ಹೆಚ್ಚು ಪ್ರಮಾಣದಲ್ಲಿ ಚಾಂಪಿಯನ್‌ಗಳು ಹೊರಬರಲಿ ಎಂದು ಕರೆ ನೀಡಿದರು.ಸಮಾರಂಭಕ್ಕೆ ಜನಸಾಗರ
ಮಂಡ್ಯ ತಾಲೂಕಿನ ವಿ.ಸಿ.ಫಾರಂನಲ್ಲಿ ನಡೆದ ಒಳಾಂಗಣ ಕ್ರೀಡಾಂಗಣದ ಶಂಕುಸ್ಥಾಪನಾ ಸಮಾರಂಭಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಜನರು ಆಗಮಿಸಿದ್ದರು. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಜನರನ್ನು ಕರೆತರುವುದಕ್ಕೆ ನೂರಕ್ಕೂ ಹೆಚ್ಚು ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಖಾಸಗಿ ಬಸ್ಸುಗಳಲ್ಲಿ ಜನರನ್ನು ಕರೆತರಲಾಗಿತ್ತು. ಮಲ್ಲನಾಯಕನ ಕಟ್ಟೆ, ದುದ್ದ, ಶಿವಳ್ಳಿ ಭಾಗದಲ್ಲಿ ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯ ತುಂಬೆಲ್ಲಾ ಜನವೋ ಜನ. ಸಮಾರಂಭಕ್ಕೆ ಬಸ್‌ಗಳಲ್ಲಿ ಕರೆತಂದ ಜನರನ್ನು ಸ್ಥಳದಲ್ಲಿ ಬಿಟ್ಟು ಹೋಗುವುದಕ್ಕೂ ಪರದಾಡುವಂತಾಗಿತ್ತು. ಸಮಾರಂಭಕ್ಕೆ ಬಂದ ಜನರಿಗೆ ಅನ್ನ, ಸಾಂಬಾರ್, ಮೊಸರನ್ನ, ಹೋಳಿಗೆ, ಪಲ್ಯ, ಪಕೋಡವನ್ನೊಳಗೊಂಡ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.ರಾಗಿ ಮುದ್ದೆ ತಿಂದೇ ಹೋಗುವೆ: ಮನ್ಸೂಖ್ ಮಾಂಡವೀಯ
ಮಂಡ್ಯಕ್ಕೆ ಬಂದಿದ್ದೇನೆ. ಇಲ್ಲಿನ ರಾಗಿಮುದ್ದೆ ಸ್ವಾದಿಷ್ಟ, ರುಚಿಕರವಾಗಿದೆ ಎಂದು ತಿಳಿದಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರಿಗೆ ಪ್ರಿಯವಾದ ರಾಗಿಮುದ್ದೆಯ ರುಚಿ ಸವಿದೇ ಹೋಗುವುದಾಗಿ ರಾಗಿ ಮುದ್ದೆ ತಿನ್ನುವ ಬಯಕೆಯನ್ನು ಕೇಂದ್ರ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು. ದೇವೇಗೌಡರಿಂದ ರಾಗಿಮುದ್ದೆ ರಾಷ್ಟ್ರಮಟ್ಟಕ್ಕೆ ಪ್ರಸಿದ್ಧಿಗೆ ಬಂದಿದೆ. ಅದರ ರುಚಿಯನ್ನು ನಾನು ಇದುವರೆಗೆ ಸವಿದಿಲ್ಲ. ಅದನ್ನು ಸವಿಯುವ ಅವಕಾಶ ಈಗ ದೊರಕಿದೆ. ಅದನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಎಂದರು.