ಸಾರಾಂಶ
ಬೆಂಗಳೂರು : ಸಚಿವರ ಅಸಹಕಾರ, ಸಮರ್ಪಕವಾಗಿ ಅನುದಾನ ಸಿಗದ ವಿಚಾರವಾಗಿ ಸಿಟ್ಟಾಗಿರುವ ಶಾಸಕರನ್ನು ಶಾಂತವಾಗಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಗುರುವಾರ 5ಕ್ಕೂ ಹೆಚ್ಚಿನ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಕ್ಷೇತ್ರದ ಕೆಲಸಗಳಿಗೆ ಅಗತ್ಯವಿರುವ ಅನುದಾನದ ಕುರಿತು ಪಟ್ಟಿ ನೀಡುವಂತೆಯೂ ಸೂಚನೆ ನೀಡಿದ್ದಾರೆ.
ದೆಹಲಿಯಿಂದ ವಾಪಸಾದ ನಂತರದಿಂದ ಶಾಸಕರ ಅಸಮಾಧಾನ ಶಮನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬುಧವಾರ ರಾತ್ರಿ ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ ಜತೆಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಜತೆಗೆ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವಂತೆ ನಡೆದುಕೊಳ್ಳದಂತೆಯೂ ತಿಳಿ ಹೇಳಿದ್ದರು. ಗುರುವಾರವೂ ಶಾಸಕರೊಂದಿಗೆ ಮಾತುಕತೆ ಮುಂದುವರಿಸಿರುವ ಸಿದ್ದರಾಮಯ್ಯ, ಗೃಹ ಕಚೇರಿ ಕೃಷ್ಣಾದಲ್ಲಿ ಬೇಳೂರು ಗೋಪಾಲಕೃಷ್ಣ, ಪಿ.ಎಂ.ನರೇಂದ್ರಸ್ವಾಮಿ, ಯು.ಬಿ.ಬಣಕಾರ್, ರಾಘವೇಂದ್ರ ಹಿಟ್ನಾಳ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಎಲ್ಲ ಶಾಸಕರಿಗೂ, ಮಾಧ್ಯಮಗಳ ಮುಂದೆ ಸಚಿವರು ಮತ್ತು ಸರ್ಕಾರದ ಕುರಿತು ಹೇಳಿಕೆಗಳನ್ನು ನೀಡಬಾರದು ಎಂದು ತಾಕೀತು ಮಾಡಿದ್ದಾರೆ. ಜತೆಗೆ ಯಾವುದೇ ಸಮಸ್ಯೆಗಳಿದ್ದರೂ ತಮ್ಮ ಬಳಿ ಚರ್ಚಿಸುವಂತೆ ಸೂಚನೆ ನೀಡಿದ್ದಾರೆ.
ಬೇಳೂರು ಗೋಪಾಲಕೃಷ್ಣ ಅವರೊಂದಿಗಿನ ಚರ್ಚೆ ವೇಳೆ ಮಾಧ್ಯಮಗಳೆದುರು ಅವರು ನೀಡಿದ ಹೇಳಿಕೆ ಕುರಿತು ಮುಖ್ಯಮಂತ್ರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿ.ಆರ್. ಪಾಟೀಲ್ ಆರೋಪಕ್ಕೆ ಧ್ವನಿಗೂಡಿಸಿ ಜಮೀರ್ ರಾಜೀನಾಮೆಗೆ ಆಗ್ರಹಿಸಿದ್ದರ ಬಗ್ಗೆಯೂ ಪ್ರಶ್ನಿಸಿದ್ದು, ಇನ್ನು ಮುಂದೆ ಈ ರೀತಿಯ ಹೇಳಿಕೆಗಳನ್ನು ನೀಡದಂತೆಯೂ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಅನುದಾನಕ್ಕೆ ಬೇಡಿಕೆಯಿಟ್ಟ ಶಾಸಕರು:
ಮುಖ್ಯಮಂತ್ರಿ ಅವರೊಂದಿಗಿನ ಚರ್ಚೆ ವೇಳೆ ಬಹುತೇಕ ಎಲ್ಲ ಶಾಸಕರು ಕ್ಷೇತ್ರದ ಕಾರ್ಯಗಳಿಗೆ ಹೆಚ್ಚಿನ ಅನುದಾನಕ್ಕೆ ಬೇಡಿಕೆಯಿಟ್ಟಿದ್ದಾರೆ. ಬಹುತೇಕ ಶಾಸಕರು ಕ್ಷೇತ್ರದ ನೀರಾವರಿ ಯೋಜನೆ, ರಸ್ತೆ, ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಅನುದಾನ ಕೇಳಿದ್ದಾರೆ. ಅದಕ್ಕೆ, ಯಾವ ಯಾವ ಕೆಲಸಕ್ಕೆ ಅನುದಾನ ಬೇಕು ಎಂದು ಪಟ್ಟಿ ನೀಡುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅದಕ್ಕೆ ಹಂತಹಂತವಾಗಿ ಅನುದಾನ ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿದುಬಂದಿದೆ.-ಬಾಕ್ಸ್-
ಎಸ್.ಟಿ.ಎಸ್ ಸಿಎಂ ಭೇಟಿ
ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕೂಡ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕ್ಷೇತ್ರ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿದ್ದು, ಅನುದಾನಕ್ಕಾಗಿ ಮನವಿ ಮಾಡಿದ್ದಾರೆ. ಈ ಕುರಿತು ಪರಿಶೀಲಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕೇಳಿದಷ್ಟು ಅನುದಾನ
ನೀಡಿದ್ದಾರೆ: ಬೇಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಮುಖ್ಯಮಂತ್ರಿ ಅವರು ಭೇಟಿಗೆ ಬರಲು ಹೇಳಿದ್ದರು, ಅದರಂತೆ ಅವರನ್ನು ಭೇಟಿಯಾಗಿದ್ದೇನೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದು, ಏನೇ ಸಮಸ್ಯೆಯಿದ್ದರೂ ಗಮನಕ್ಕೆ ತರುವಂತೆ ಹೇಳಿದ್ದಾರೆ. ಬಹಿರಂಗವಾಗಿ ಮಾತನಾಡದಂತೆ ತಿಳಿಸಿದ್ದಾರೆ. ಇನ್ನು, ಅನುದಾನ ಕೊರತೆಯಾಗಿದೆ ಎಂಬ ಪ್ರಶ್ನೆಯೇಯಿಲ್ಲ. ಅನುದಾನ ಸರಿಯಾಗಿ ಸಿಗುತ್ತಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಜೈ ಎಂದರೆ ಮಾತ್ರ ಅನುದಾನ ಸಿಗುತ್ತದೆ ಎಂಬ ಮಾತು ಸುಳ್ಳು ಎಂದು ತಿಳಿಸಿದರು.
ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ ವಿಚಾರವಾಗಿ ಯೂ-ಟರ್ನ್ ಹೊಡೆದ ಬೇಳೂರು ಗೋಪಾಲಕೃಷ್ಣ, ಸಚಿವರ ಕಾರ್ಯವೈಖರಿ ಬಗ್ಗೆ ನನಗೆ ಯಾವುದೇ ಸಮಸ್ಯೆಯಿಲ್ಲ. ಜಮೀರ್ ಅಹಮದ್ ಖಾನ್ ಅವರ ರಾಜೀನಾಮೆಗೆ ಹಿರಿಯ ಶಾಸಕರು ಆಗ್ರಹಿಸಿದ್ದರು. ಅದಕ್ಕೆ ನಾನು ಧ್ವನಿಗೂಡಿಸಿದ್ದೆನಷ್ಟೇ. ಆದರೆ, ಸಮಸ್ಯೆಯಿದ್ದರೆ ತಾವೇ ರಾಜೀನಾಮೆ ಕೊಡುತ್ತೇನೆ ಎಂದು ಜಮೀರ್ ಹೇಳಿದ್ದಾರೆ. ಹಾಗಾಗಿ ರಾಜೀನಾಮೆ ಕೇಳುವ ಪ್ರಶ್ನೆಯೇಯಿಲ್ಲ. ಜಮೀರ್ ಬಹಳ ಒಳ್ಳೆಯ ವ್ಯಕ್ತಿ, ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.
ಜಮೀರ್ ಅಹಮದ್ ಖಾನ್ ಅವರನ್ನು ರಾಜೀನಾಮೆ ಕೊಡಿಸಿ ನಾನು ಸಚಿವನಾಗಬೇಕಿಲ್ಲ. ಹಾಗೆಂದು ನಾನು ಸನ್ಯಾಸಿಯಲ್ಲ. ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು.