ಸಂಚಾರ ನಿಯಮ ಉಲ್ಲಂಘನೆಯ ಕುರಿತು ದಂಡ ಪಾವತಿಸದೇ ಇರುವವರ ವಿರುದ್ಧ ಕಾನೂನು ಅಡಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ವಾಹನಗಳ ಮೇಲೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತೆಗೆದಿರುವ ಭಾವಚಿತ್ರಗಳನ್ನು ಮತ್ತು ಟ್ರಾಫಿಕ್ ಕಂಟ್ರೋಲ್ ಮತ್ತು ಕಮಾಂಡ್ ಸೆಂಟರ್‌ನಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿರುವ ವಾಹನ ಚಾಲಕ/ಸವಾರರ ಸಂಚಾರ ನಿಯಮ ಉಲ್ಲಂಘನೆಯ ಐಎಂವಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ವಾಹನ ಚಾಲಕರು/ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಕುರಿತು ಅಂಚೆ ಮೂಲಕ ನೋಟಿಸ್‌ಗಳನ್ನು ನೋಂದಣಿ ಸಂಖ್ಯೆಯ ಮಾಲೀಕರಿಗೆ ಈಗಾಗಲೇ ಕಳುಹಿಸಲಾಗಿದ್ದು, ದಂಡವನ್ನು ಕಟ್ಟದೇ ಹಲವಾರು ಪ್ರಕರಣಗಳು ಬಾಕಿ ಇರುತ್ತದೆ.

ಸಂಚಾರ ನಿಯಮ ಉಲ್ಲಂಘನೆಯ ಕುರಿತು ದಂಡ ಪಾವತಿಸದೇ ಇರುವವರ ವಿರುದ್ಧ ಕಾನೂನು ಅಡಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಥಮ ಹಂತವಾಗಿ ದಂಡ ಪಾವತಿ ಮಾಡಲು ವಾಹನ ನೋಂದಣಿ ಮಾಲೀಕರಿಗೆ ಈಗಾಗಲೇ ಅಂಚೆ ಮೂಲಕ ನೋಟಿಸ್ ಕಳುಹಿಸಲಾಗಿದೆ. 15-07-2025 ರ ಒಳಗಾಗಿ ದಂಡ ಪಾವತಿಸಲು ವಿಫಲರಾದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಕುರಿತು ನೋಂದಣಿ ಮಾಲೀಕರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗುವುದು. ನಂತರ ನ್ಯಾಯಾಲಯದಿಂದ ಹೊರಡಿಸುವ ಸಮನ್ಸ್/ವಾರಂಟ್‌ ಪ್ರಕ್ರಿಯೆಗಳು ಮುಂದುವರಿಯುತ್ತದೆ.

ಆದ್ದರಿಂದ ನೋಟಿಸ್ ಸ್ವೀಕೃತಿಯಾಗಿರುವ ವಾಹನದ ನೋಂದಣಿ ಮಾಲೀಕರು ದಂಡವನ್ನು ಪಾವತಿ ಮಾಡಿ, ಮುಂದೆ ಆಗುವ ಪರಿಣಾಮಗಳಿಗೆ ಅವಕಾಶವನ್ನು ನೀಡದಂತೆ ಮಂಗಳೂರಿನ ಸಂಚಾರಿ ಪೊಲೀಸರು ಕೋರಿದ್ದಾರೆ.

.........................

ಸಂಚಾರಿ ನಿಯಮ ಉಲ್ಲಂಘನೆ ಪರಿಶೀಲನೆ, ದಂಡ ಪಾವತಿಗೆ ಹೀಗೆ ಮಾಡಿ

ಮಂಗಳೂರು ನಗರದಲ್ಲಿ ವಾಹನ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದೆಯೇ ಎಂದು ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅನುಸರಿಸಬೇಕಾದ ವಿಧಾನಗಳು:

ಈ ಕೆಳಕಂಡ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಥವಾ ದೂರವಾಣಿ ಕರೆ ಮಾಡಿ ವಿಚಾರಿಸಲು, ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿರುತ್ತದೆ.

ಸಂಚಾರಿ ಪೂರ್ವ ಪೊಲೀಸ್‌ ಠಾಣೆ ಕದ್ರಿ 0824-2220523, ಸಂಚಾರಿ ಪಶ್ಚಿಮ ಪೊಲೀಸ್‌ ಠಾಣೆ ಪಾಂಡೇಶ್ವರ 0824-2220524, ಸಂಚಾರಿ ಉತ್ತರ ಪೊಲೀಸ್‌ ಠಾಣೆ ಬೈಕಂಪಾಡಿ 0824-2220833, ಸಂಚಾರಿ ದಕ್ಷಿಣ ಪೊಲೀಸ್‌ ಠಾಣೆ ಜೆಪ್ಪಿನಮೊಗರು 0824-2220850, ಎಸಿಪಿ ಟ್ರಾಫಿಕ್‌ ಕಚೇರಿ ಪಾಂಡೇಶ್ವರ 0824-2220823

ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸ್ ಅಧಿಕಾರಿಗಳಲ್ಲಿ ಇರುವ ಡಿವೈಸ್‌ಗಳಲ್ಲಿ ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿದೆ.

ಕರ್ನಾಟಕ ರಾಜ್ಯದಲ್ಲಿರುವ ಯಾವುದೇ ಅಂಚೆ ಕಚೇರಿಯಲ್ಲಿ ವಿಚಾರಿಸಲು ಮತ್ತು ದಂಡ ಪಾವತಿಸಲು ಅವಕಾಶವಿರುತ್ತದೆ.

ತಮ್ಮ ಸಮೀಪದ ಯಾವುದೇ ಕರ್ನಾಟಕ-ವನ್ ಕೇಂದ್ರಕ್ಕೆ ಭೇಟಿ ನೀಡಿ ದಂಡ ಪಾವತಿ ಮಾಡಬಹುದಾಗಿದೆ.

Online payment ಸೇವೆಯಾದ karnataka one: https://www.karnatakaone.gov.in/PoliceCollectionOfFine/PoliceCollectionOfFine/dGVtYitUZkgvWitkcG1iV0RJamJWZz09 ವೆಬ್ ಸೈಟ್ / ಅಪ್ ಮೂಲಕ ಲಾಗಿನ್ ಆಗಿ ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.