ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 31ನೇ ವರ್ಷದ ಕೊಡವ ಸಾಂಪ್ರದಾಯಿಕ ‘ಕಕ್ಕಡ ಪದ್ನೆಟ್’ ಹಬ್ಬವನ್ನು ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್ ನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಮಾಧ್ಯಮ ವರದಿಗಾರ ಹಾಗೂ ಹಿಂದಿನ ಉಪ ಮುಖ್ಯಮಂತ್ರಿಗಳ ಮಾಧ್ಯಮ ಮತ್ತು ರಾಜಕೀಯ ಸಲಹೆಗಾರ ದೀಪಕ್ ತಿಮ್ಮಯ್ಯ ಅವರು, ಕೊಡವ ಭೂಮಿ ಕಳೆದುಕೊಂಡರೆ ಮುಂದೆ ಕೊಡವರ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.‘ಕಕ್ಕಡ ಪದ್ನೆಟ್’ಹಬ್ಬವನ್ನು ಕೊಡವ ಪರಂಪರೆಯ ಪವಿತ್ರ ಮಂದ್ ನಲ್ಲಿ ಆರಂಭಿಸಲಾಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಮುಖ್ಯ ಅತಿಥಿ ದೀಪಕ್ ತಿಮ್ಮಯ್ಯ ಹಾಗೂ ಮಂದಪಂಡ ಮನೋಜ್ ಮಂದಣ್ಣ ಅವರು ಪೂರ್ವಜರ ಗೌರವ ಸೂಚಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದರು. ನಂತರ ಬಾಳೆಕಂಬ ಕತ್ತರಿಸುವ ಬಾಳೆಬೆಂಗುವ ವಿಧಿ ನೆರವೇರಿಸಲಾಯಿತು. ಮೆರವಣಿಗೆ ಮೂಲಕ ಭತ್ತದ ಗದ್ದೆಗೆ ತೆರಳಿದ ನಾಚಪ್ಪ ಅವರು ಕೃಷಿ ಋತುವಿನ ಆರಂಭ ಸೂಚಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು.
ಸಿಎನ್‌ಸಿ ಸದಸ್ಯರು, ಸ್ವಯಂ ಸೇವಕರು ಹಾಗೂ ಕೊಡವ, ಕೊಡವತಿಯರು ಸಾಂಪ್ರದಾಯಿಕವಾಗಿ ಭತ್ತದ ನಾಟಿ ಕಾರ್ಯ ಮಾಡಿದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎನ್.ಯು. ನಾಚಪ್ಪ ಅವರು 10 ಅಂಶಗಳ ಸಾಂವಿಧಾನಿಕ ನಿರ್ಣಯ ಮಂಡಿಸಿದರು. ನೆರೆದಿದ್ದವರು ಸರ್ವಾನುಮತದಿಂದ ಸಹಿ ಮಾಡಿ ನಿರ್ಣಯ ಅಂಗೀಕರಿಸಿದರು. ಗುರು-ಕಾರೋಣ, ಸೂರ್ಯ-ಚಂದ್ರ, ಭೂತಾಯಿ, ಪ್ರಕೃತಿ ಮತ್ತು ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿಯ 36 ವರ್ಷಗಳ ಸಾಂವಿಧಾನಿಕ ಹೋರಾಟಕ್ಕೆ ಸಂಪೂರ್ಣ ಬೆಂಬಲವಾಗಿ ಪವಿತ್ರ ಪ್ರತಿಜ್ಞೆ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೊಡವ ಸಾಂಪ್ರದಾಯಿಕ ನಾಡ್ ಕೋಳಿ ಊಟ, ಮದ್ದ್ ಪಾಯಸ ಮತ್ತು ವಿವಿಧ ಕಕ್ಕಡ ಖಾದ್ಯಗಳನ್ನು ಸವಿದರು. ಕೊಡವ ಭೂಮಿಯೇ ಕೊಡವರ ಆತ್ಮ:ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿ ದೀಪಕ್ ತಿಮ್ಮಯ್ಯ, ಕೊಡವ ಉಡುಗೆ ತೊಡುಗೆ ತೊಟ್ಟು ನೃತ್ಯವನ್ನು ಪ್ರದರ್ಶಿಸುವುದರಿಂದ ಮಾತ್ರ ಕೊಡವ ಗುರುತನ್ನು ನಿರ್ಧರಿಸಲು ಸಾಧ್ಯವಿಲ್ಲ. ಕೊಡವರ ಆತ್ಮಗೌರವ ಮತ್ತು ನೈತಿಕತೆ ನಮ್ಮ ಪೂರ್ವಿಕರ ಭೂಮಿಯಲ್ಲಿ, ನಮ್ಮ ತಾಯ್ನಾಡಿನಲ್ಲಿ ಮಾತ್ರ ನೆಲೆಸಿದೆ. ಕೊಡವ ಭೂಮಿಯನ್ನು ಕಳೆದುಕೊಂಡರೆ ಕೊಡವರು, ಕೊಡವರನ್ನು ಕಳೆದುಕೊಂಡರೆ ಕೊಡವ ಲ್ಯಾಂಡ್ ಮತ್ತು ಕೊಡಗು ಇರುವುದಿಲ್ಲ. ಕೊಡವ ತಾಯ್ನಾಡಿನ ಭೂಮಿಯನ್ನು ಕಳೆದುಕೊಂಡರೆ, ನೀವು ಎಲ್ಲಿ ಕೊಡವ ನೃತ್ಯ ಮಾಡುತ್ತೀರಿ ಎಂದು ಪ್ರಶ್ನಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಯು. ನಾಚಪ್ಪ ಅವರು, ಭಾರತದ ಸಂವಿಧಾನದ 244 ಮತ್ತು 371ನೇ ವಿಧಿಗಳು ಆರ್/ಡಬ್ಲ್ಯು 5, 6 ಮತ್ತು 8ನೇ ಪರಿಚ್ಛೇದಗಳ ಅಡಿಯಲ್ಲಿ ಗೂರ್ಖಾಲ್ಯಾಂಡ್, ಲೇಹ್, ಲಡಾಖ್ ಮತ್ತು ಈಶಾನ್ಯ ಭಾರತದ ರಾಜ್ಯಗಳ ಮಾದರಿಯಲ್ಲಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಿದರು.
ಪುಲ್ಲೇರ ಸ್ವಾತಿ, ಅಪ್ಪಚ್ಚಿರ ರೀನಾ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ನಂದಿನೆರವಂದ ರೇಖಾ, ಪಟ್ಟಮಾಡ ಲಲಿತಾ, ನಂದಿನೆರವಂಡ ಬೀನಾ, ಕೂತಂಡ ಸರ್ಸು ಅಪ್ಪಯ್ಯ, ನಂದಿನೆರವಂಡ ನಿಶಾ, ನಂದಿನೆರವಂಡ ಸುಮಿತ್ರಾ- ಪ್ರಾಂಶುಪಾಲರು ಕೊಡಗು ವಿದ್ಯಾಲಯ, ಈಳಪಂಡ ಪುಷ್ಪಾ ಉತ್ತಪ್ಪ, ಮೇಷ್ಟ್ರು ಅಪ್ಪಯ್ಯ ಪಾಲ್ಗೊಂಡಿದ್ದರು.