ನಿರಾಶ್ರಿತರ ಕೇಂದ್ರದಲ್ಲಿ ಸ್ವಾವಲಂಬಿ ಬದುಕಿಗೆ ತೆಂಗಿನ ನಾರು ಮುನ್ನುಡಿ

| Published : Aug 07 2025, 12:45 AM IST

ನಿರಾಶ್ರಿತರ ಕೇಂದ್ರದಲ್ಲಿ ಸ್ವಾವಲಂಬಿ ಬದುಕಿಗೆ ತೆಂಗಿನ ನಾರು ಮುನ್ನುಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜೈಲುಗಳಲ್ಲಿ ಕೈದಿಗಳಿಗೆ ಕೆಲಸ ಕೊಟ್ಟು ಕೂಲಿ ಹಣ ನೀಡುವ ಮಾದರಿಯಲ್ಲಿ ದಿನಕ್ಕೆ ನಾಲ್ಕು ಗಂಟೆ ಮ್ಯಾಟ್ ತಯಾರಿಕೆಗೆ ಕೆಲಸ ನೀಡಲಾಗುತ್ತಿದ್ದು, ನಾಲ್ಕು ಗಂಟೆ ಕೆಲಸಕ್ಕೆ ೩೮ ರು.ಗಳನ್ನು ನಿಗದಿ ಮಾಡಲಾಗಿದೆ. ಯಾರು ಎಷ್ಟು ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಾರೋ ಎಂಬುದನ್ನು ಲೆಕ್ಕ ನೋಡಿಕೊಂಡು ಅಷ್ಟು ಹಣವನ್ನು ನಿರಾಶ್ರಿತರಿಗೆ ಖಾತೆಯನ್ನು ತೆರೆದು ಅದಕ್ಕೆ ಜಮಾ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ನಿರಾಶ್ರಿತರ ಆರೈಕೆಗೆ ತೆರೆದಿರುವ ನಿರಾಶ್ರಿತ ಕೇಂದ್ರದಲ್ಲಿ ಆರೈಕೆ ಜೊತೆಗೆ ಆದಾಯ ಚಟುವಟಿಕೆಗಳನ್ನು ಕೈಗೊಂಡಿರುವುದರಿಂದ ನಿರಾಶ್ರಿತರ ಆದಾಯಕ್ಕೆ ನೆರವಾಗಿದ್ದು, ಮುಂದೆ ಮುಖ್ಯವಾಹಿನಿಗೆ ಬಂದಾಗ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಸಹಕಾರಿಯಾಗಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ನಿರಾಶ್ರಿತರಿಗೆ ಆಶ್ರಯ ಮತ್ತು ಆರೈಕೆ ನೀಡುವ ಸಲುವಾಗಿ ತಾಲೂಕಿನ ಬೀರಂಡಹಳ್ಳಿ ಗ್ರಾಮದ ಬಳಿ ೨೦೦೨ರಲ್ಲಿ ಕೇಂದ್ರ ಪರಿಹಾರ ಸಮಿತಿಯ ಮೂಲಕ ನಿರಾಶ್ರಿತ ಕೇಂದ್ರವನ್ನು ತೆರೆಯಲಾಗಿದೆ. ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳ ಮೂಲಕ ನಾಗರಿಕರಿಂದ ವಸೂಲಿ ಮಾಡುವಂತಹ ಶೇಕಡಾ ೩ರಷ್ಟು ಸುಂಕದ ಹಣದಿಂದ ಕೇಂದ್ರವನ್ನು ನಡೆಸಲಾಗುತ್ತಿದೆ. ಕೇಂದ್ರದಲ್ಲಿ ಬಿಹಾರ, ಗುಜರಾತ್, ಉತ್ತರ ಪ್ರದೇಶ, ತಮಿಳುನಾಡು ಸೇರಿ ದೇಶದ ನಾನಾ ಭಾಗಗಳಿಂದ ಬಂದಿರುವಂತಹ ಮಾನಸಿಕ ಅಸ್ವಸ್ಥರು ಹಾಗೂ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಸದ್ಯ ಕೇಂದ್ರದಲ್ಲಿ ೧೩೧ ಪುರುಷರು, ೨೭ ಮಹಿಳೆಯರು ಸೇರಿ ಒಟ್ಟು ೧೫೮ ಮಂದಿ ಆಶ್ರಯ ಪಡೆಯುತ್ತಿದ್ದು, ಇವರಲ್ಲಿ ಸುಮಾರು ೧೧೦ ಜನರು ಮಾನಸಿಕ ಅಸ್ವಸ್ಥರಾಗಿದ್ದಾರೆ.

ಸರ್ಕಾರದ ಅಂಗ ಸಂಸ್ಥೆಯ ಮೂಲಕ ಸುಮಾರು ೧೦ ಎಕರೆ ಪ್ರದೇಶದಲ್ಲಿ ತೆರೆದಿರುವ ಕೇಂದ್ರದಲ್ಲಿ

ಬಹುಮುಖ್ಯವಾಗಿ ಕರ್ನಾಟಕ ತೆಂಗಿನ ನಾರು ಅಭಿವೃದ್ಧಿ ನಿಗಮದಿಂದ ನಿರಾಶ್ರಿತರಿಗೆ ತೆಂಗಿನ ನಾರು ಉತ್ಪನ್ನಗಳ ತಯಾರಿಕೆಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರಿಂದ ನಾರಿನಿಂದ ಹುರಿ ತಯಾರಿಸಿ ಅದರ ಮೂಲಕ ಮ್ಯಾಟ್ ಗಳನ್ನು ತಯಾರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಸುಮಾರು ೧೨ ಮಂದಿ ತರಬೇತಿಯನ್ನು ಪಡೆದು ಮ್ಯಾಟುಗಳನ್ನು ತಯಾರಿಸಲು ಮುಂದಾಗಿದ್ದು, ಇತರೆ ಆಸಕ್ತರಿಗೂ ಸಹ ವಾರಕ್ಕೆ ನಾಲ್ಕು ದಿನ ತರಬೇತಿ ನೀಡಲು ನಿಗಮ ಮುಂದಾಗಿದೆ. ತೆಂಗಿನ ನಾರಿನ ಮ್ಯಾಟುಗಳನ್ನು ತಯಾರಿಸಲು ಬೇಕಾದ ಎಲ್ಲಾ ಬಗೆಯ ಕಚ್ಚಾ ವಸ್ತುಗಳನ್ನು ನಿಗಮವೇ ಪೂರೈಕೆ ಮಾಡುತ್ತಿದ್ದು, ತಯಾರಾದ ಮ್ಯಾಟುಗಳನ್ನು ಸಹ ನಿಗಮವೇ ಖರೀದಿಸುತ್ತಿದೆ.

ಜೈಲುಗಳಲ್ಲಿ ಕೈದಿಗಳಿಗೆ ಕೆಲಸ ಕೊಟ್ಟು ಕೂಲಿ ಹಣ ನೀಡುವ ಮಾದರಿಯಲ್ಲಿ ದಿನಕ್ಕೆ ನಾಲ್ಕು ಗಂಟೆ ಮ್ಯಾಟ್ ತಯಾರಿಕೆಗೆ ಕೆಲಸ ನೀಡಲಾಗುತ್ತಿದ್ದು, ನಾಲ್ಕು ಗಂಟೆ ಕೆಲಸಕ್ಕೆ ೩೮ ರು.ಗಳನ್ನು ನಿಗದಿ ಮಾಡಲಾಗಿದೆ. ಯಾರು ಎಷ್ಟು ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಾರೋ ಎಂಬುದನ್ನು ಲೆಕ್ಕ ನೋಡಿಕೊಂಡು ಅಷ್ಟು ಹಣವನ್ನು ನಿರಾಶ್ರಿತರಿಗೆ ಖಾತೆಯನ್ನು ತೆರೆದು ಅದಕ್ಕೆ ಜಮಾ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಿರಾಶ್ರಿತರು ಮತ್ತು ಮಾನಸಿಕ ಅಸ್ವಸ್ಥರು ಕೇಂದ್ರದಲ್ಲಿ ಆರೈಕೆ ಮತ್ತು ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಮನೆಗೆ ಹೋಗುವ ವೇಳೆ ಅಥವಾ ಹೋದ ನಂತರ ಹಣವನ್ನು ಬ್ಯಾಂಕ್ ನಿಂದ ಪಡೆಯಲು ಅವಕಾಶ ನೀಡಲಾಗಿದೆ. ನಿರಾಶ್ರಿತರು, ಮಾನಸಿಕ ಅಸ್ವಸ್ಥರು ಗುಣಮುಖರಾಗಿ ಮುಖ್ಯವಾಹಿನಿಗೆ ಹೋದ ನಂತರ ಯಾರೊಬ್ಬರ ಕೈ ಕೆಳಗೂ ಕೆಲಸ ಮಾಡುವುದಾಗಲಿ ಅಥವಾ ಕೆಲಸವಿಲ್ಲದೆ ಅಲೆದಾಡುವುದನ್ನು ತಪ್ಪಿಸಿ ಸ್ವಯಂ ಉದ್ಯೋಗ ಮಾಡುತ್ತಾ ತಮ್ಮ ಕಾಲ ಮೇಲೆ ನಿಂತು ಜೀವನ ಮುನ್ನಡೆಸಲು ಕಾರ್ಯಕ್ರಮ ಸಹಕಾರಿಯಾಗಿದೆ.

‘ನಿರಾಶ್ರಿತರ ಕೇಂದ್ರದಲ್ಲಿ ಕೈಗೊಂಡಿರುವ ಮ್ಯಾಟ್ ತಯಾರಿಕಾ ಕಾರ್ಯಕ್ರಮ ಬಹಳ ಉತ್ತಮವಾಗಿ ನಡೆಯುತ್ತಿದ್ದು, ಅಲ್ಲಿ ತಯಾರಾಗುವಂತಹ ಮ್ಯಾಟ್ ಗಳನ್ನು ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಬಳಕೆ ಮಾಡಲು ಖರೀದಿಸಬೇಕು. ಇದರಿಂದ ನಿರಾಶ್ರಿತ ಕಾರ್ಮಿಕರಿಗೆ ಆದಾಯ ಪಡೆಯಲು ಸಹಕಾರಿಯಾಗುತ್ತದೆ.’ ಎಂ.ಮಲ್ಲೇಶಬಾಬು, ಸಂಸದರು