ಸಾರಾಂಶ
- 6 ಕುರಿಗಳಿಗೆ ಗಾಯ: ಚಿಕಿತ್ಸೆ । ಬೆಳಗಾವಿ ಜಿಲ್ಲೆ ಸದಲಗಾ ಮೂಲದ ಸೋಮಣ್ಣ ಎಂಬವರ ಕುರಿಗಳ ಸಾವು
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಎರಡು ಚಿರತೆಗಳ ಭೀಕರ ದಾಳಿಯಿಂದ ೨೧ ಕುರಿಗಳು ಬಲಿಯಾಗಿ, 6 ಕುರಿಗಳು ಗಾಯಗೊಂಡಿರುವ ಘಟನೆ ಮಲೇಬೆನ್ನೂರು ಸಮೀಪದ ಹೊಳೆ ಸಿರಿಗೆರೆ ಕ್ರಾಸ್ ಬಳಿ ಮಂಗಳವಾರ ಮಧ್ಯರಾತ್ರಿ 2.30ರ ಸುಮಾರಿಗೆ ನಡೆದಿದೆ.ಬೆಳಗಾವಿ ಜಿಲ್ಲೆಯ ಸದಲಗಾ ಮೂಲದ ಸೋಮಣ್ಣ ಎಂಬವರು 4 ದಿನಗಳಿಂದ ಸಿರಿಗೆರೆ ಬೀರಣ್ಣ ಎಂಬವರ ಅಡಕೆ ತೋಟದಲ್ಲಿ 130 ಕುರಿಗಳ ಹಿಂಡಿನೊಂದಿಗೆ ಬೀಡುಬಿಟ್ಟಿದ್ದರು. ರಾತ್ರಿ ಕುರಿಗಳು ತಂಗಿದ್ದ ಹಿಂಡಿನ ಬಳಿಗೆ ಚಿರತೆಗಳು ದಾಳಿ ಮಾಡಿವೆ. ಈ ವೇಳೆ ಕುರಿಗಳ ಚೀರಾಟ ಕಂಡು ಮಾಲೀಕ ಸೋಮಣ್ಣ ನೆರವಿಗೆ ಧಾವಿಸಿದ್ದಾರೆ. ಸೋಮಣ್ಣನ ಕಂಡ 2 ಚಿರತೆಗಳು ಓಡಿಹೋಗಿವೆ. ಚಿರತೆಗಳ ದಾಳಿ ಕಂಡ ನಾಯಿಗಳೂ ಭಯಪಟ್ಟಿವೆ.
ಚಿರತೆಗಳ ಭೀಕರ ದಾಳಿ:ಕುರಿಗಳು ಮತ್ತು ಮಾಲೀಕರ ಕುಟುಂಬ ತಂಗಿದ್ದ ಸ್ವಲ್ಪ ದೂರದಲ್ಲಿಯೇ ಈ ದುರ್ಘಟನೆ ನಡೆದಿದೆ. ಹಿಂಡಿನಲ್ಲಿದ್ದ ೨೧ ಕುರಿಗಳು ಮೃತಪಟ್ಟಿವೆ. ಗರ್ಭ ಧರಿಸಿದ ತಾಯಿಕುರಿ ಹೊಟ್ಟೆಯಿಂದ ಮರಿಕುರಿ ಹೊರಬಂದಿರುವ ಪರಿ ಮನಕಲಕುವಂತಿತ್ತು. ಕೆಲ ಕುರಿಗಳ ಮಾಂಸಖಂಡಗಳು ಹೊರಬಂದಿದ್ದು ಚಿರತೆಗಳ ಭೀಕರ ದಾಳಿಗೆ ಸಾಕ್ಷಿಯಾಗಿತ್ತು. ಗಾಯಗೊಂಡಿರುವ ಆರು ಕುರಿಗಳು ಚೇತರಿಕೆ ಕಾಣುತ್ತಿವೆ. ಕುರಿಗಳು ಮೃತಪಟ್ಟ ಘಟನೆಯಿಂದ ಆಘಾತಕ್ಕೊಳಗಾಗಿರುವ ಸೋಮಣ್ಣನ ಪತ್ನಿ ಶೀಲಾ, ಸೊಸೆ ಸರಸ್ವತಿ ಉಪಾಹಾರವನ್ನೂ ಸೇವಿಸದೇ ರೋದಿಸುತ್ತಿದ್ದರು.
ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು:ವಲಯ ಅರಣ್ಯ ಅಧಿಕಾರಿ ಷಣ್ಮುಖ ಘಟನಾ ಸ್ಥಳಕ್ಕೆ ಆಗಮಿಸಿ ಮರಣ ಹೊಂದಿದ ಕುರಿಗಳ ಪರಿಶೀಲಿಸಿದರು. ವಲಯ ಅರಣ್ಯ ವ್ಯಾಪ್ತಿಗೆ 4 ತಾಲೂಕಿನ 80 ಗ್ರಾಮಗಳು ಬರುತ್ತವೆ. ಕಾಡು ಪ್ರಾಣಿಗಳು ಚಿರತೆಗಳು ರಾತ್ರಿ ಸಮಯದಲ್ಲಿ ಕ್ರಿಯಾಶೀಲವಾಗಿರುತ್ತವೆ. ಚಿರತೆಗಳ ಹಿಡಿಯುವವರೆಗೂ ರೈತರು ಜಮೀನಿಗೆ ತೆರಳುವುದು ಸೂಕ್ತವಲ್ಲ. ಚಿರತೆಗಳ ಹಿಡಿಯಲು ಬೋನು ಅಳವಡಿಸಲಾಗುವುದು. ಆಯಾ ಭಾಗಗಳ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ತಿಳಿಸಿ, ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಟಾಂ ಟಾಂ ಹೊಡೆಸಲು ಸೂಚನೆ ನೀಡುತ್ತೇವೆ ಎಂದರು.
ಪಶು ವೈದ್ಯ ಡಾ. ಬಾಬಾ ಬುಡೆನ್ ಮರಣ ಹೊಂದಿದ ಮೃತ ಕುರಿಗಳನ್ನು ಪರೀಕ್ಷಿಸಿ, ಗಾಯಗೊಂಡ ಕುರಿಗಳಿಗೆ ಪ್ರಥಮ ಚಿಕಿತ್ಸೆ ನೀಡಿದರು.ತಹಸೀಲ್ದಾರ್ ಗುರುಬಸವರಾಜ್, ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಲೀನಾ ಸಜ್ಜನ್, ಗ್ರಾ.ಪಂ. ಅಧ್ಯಕ್ಷ ಪ್ರಭು, ಉಪ ತಹಸೀಲ್ದಾರ್ ರವಿ, ಗ್ರಾಮಾಡಳಿತ ಅಧಿಕಾರಿ ಅಣ್ಣಪ್ಪ, ಷರೀಫ್, ಭರಮಗೌಡ, ಪರಶುರಾಮ್ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಸ್ಥಳಕ್ಕೆ ಜಮಾಯಿಸಿದ್ದರು.
- - -(ಕೋಟ್ಸ್) ಇದು ಭತ್ತ ನಾಟಿ ಮಾಡುವ ಕಾಲವಾಗಿದೆ. ರೈತರು ಒಬ್ಬರೇ ಮಡಿಗಳಿಗೆ ನೀರು ಕಟ್ಟಲು ಜಮೀನಿಗೆ ಬರಬೇಕಾಗಿರುತ್ತದೆ. ವನ್ಯಜೀವಿಗಳು ಜನರ ಮೇಲೆ ಹೀಗೆ ದಾಳಿ ಮಾಡಿದರೆ ಯಾರು ಹೊಣೆ? ಇಂಥ ಅನಾಹುತ ಮತ್ತೆ ನಡೆಯದಂತೆ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮೊದಲು ಚಿರತೆಗಳನ್ನು ಸೆರೆಹಿಡಿಯಬೇಕು.
- ಪಾಲಾಕ್ಷಪ್ಪ, ರೈತ ಪಶು ವೈದ್ಯರು, ಕಂದಾಯ ಮತ್ತು ಅರಣ್ಯ ಇಲಾಖೆಗಳು ವರದಿ ಪಡೆದ ನಂತರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯವರಿಗೆ ವರದಿ ಮಾಡಲಾಗುತ್ತದೆ. ಬೆಳಗಾವಿಯಲ್ಲಿನ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿಯಿಂದ ಪರಿಹಾರ ನೀಡಲು ಪತ್ರ ಬರೆಯಲಾಗುವುದು.- ಸಂತೋಷ್, ಉಪವಿಭಾಗಾಧಿಕಾರಿ
- - --ಚಿತ್ರ-೨.ಜೆಪಿಜಿ: ಮಲೇಬೆನ್ನೂರು ಸಮೀಪದ ಹೊಳೆ ಸಿರಿಗೆರೆ ಕ್ರಾಸ್ ಬಳಿ ಮಂಗಳವಾರ ರಾತ್ರಿ ಚಿರತೆಗಳ ದಾಳಿಗೆ ಮೃತಪಟ್ಟ ಕುರಿಗಳನ್ನು ಅಧಿಕಾರಿಗಳು ಪರಿಶೀಲಿಸಿದರು.