ಕನ್ನಡ ರಾಜ್ಯೋತ್ಸವ ಅದ್ಧೂರಿ ಆಚರಣೆಗೆ ಸಹಕರಿಸಿ

| Published : Oct 26 2025, 02:00 AM IST

ಸಾರಾಂಶ

ಕನ್ನಡ ನಾಡು-ನುಡಿ, ಕಲೆ ಸಂಸ್ಕೃತಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳಿಂದ ಸ್ತಬ್ಧಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅರ್ಥಪೂರ್ಣವಾಗಿ ಆವರಿಸುವಂತೆ ಸಂಬಂಧಿಸಿದವರಿಗೆ ಸೂಚಿಸಿದರು.

ಯಲಬುರ್ಗಾ: ಕನ್ನಡ ರಾಜ್ಯೋತ್ಸವವನ್ನು ತಾಲೂಕಾಡಳಿತದಿಂದ ಅದ್ಧೂರಿ ಆಚರಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.

ಪಟ್ಟಣದ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನ. ೧ರಂದು ನಡೆಯುವ ಕನ್ನಡ ಹಬ್ಬದಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಭಾಗವಹಿಸಬೇಕು. ಕನ್ನಡ ರಾಜ್ಯೋತ್ಸವ ಕನ್ನಡಿಗರ ಸಂಭ್ರಮದ ಹಬ್ಬವಾಗಿದ್ದು, ಅಚ್ಚುಕಟ್ಟಾಗಿ ಆಚರಿಸಲು ಎಲ್ಲ ಕನ್ನಡ ಮನಸ್ಸುಗಳ ಸಹಕಾರ ಅಗತ್ಯವಿದೆ ಎಂದರು.

ಶಾಲೆಗಳಲ್ಲಿ ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವುದು ಮತ್ತು ಕನ್ನಡ ನಾಡು-ನುಡಿ, ಕಲೆ ಸಂಸ್ಕೃತಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳಿಂದ ಸ್ತಬ್ಧಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅರ್ಥಪೂರ್ಣವಾಗಿ ಆವರಿಸುವಂತೆ ಸಂಬಂಧಿಸಿದವರಿಗೆ ಸೂಚಿಸಿದರು.

ಕನ್ನಡಪರ ಹೋರಾಟಗಾರ ರಾಜಶೇಖರ ಶ್ಯಾಗೋಟಿ, ಶಿವಕುಮಾರ ನಾಗನಗೌಡ್ರ, ಬಸವರಾಜ ಹಳ್ಳಿ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ಕನ್ನಡ ಅಭಿಮಾನಿಗಳ ವಿಜೃಂಭಣೆಯಿಂದ ಆಚರಿಸುವ ಹಬ್ಬವಾಗಿದೆ. ಇದು ಅರ್ಥಪೂರ್ಣವಾಗಿ ಆಚರಣೆಯಾಗಬೇಕು. ನಾಡು ನುಡಿ, ಕಲೆ ಸಾಹಿತ್ಯ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಗುರುತಿಸಿ ಗೌರವಿಸಬೇಕು. ಶಾಲೆಗಳಲ್ಲಿ ರಾಜ್ಯೋತ್ಸವ ಆಚರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಂಗಡಿಗಳ ಮೇಲೆ ಕನ್ನಡ ಬಾವುಟ ರಾರಾಜಿಸಬೇಕು ಎಂದರು.

ಈ ಸಂದರ್ಭ ಪ್ರಮೋದ ತುಂಬಳ, ನಿಂಗನಗೌಡ ಪಾಟೀಲ್, ಸಂಜಯ ಚಿತ್ರಗಾರ, ಯಾಸಿನ್ ಮುಲ್ಲಾ, ವೀರಭದ್ರಪ್ಪ ಅಂಗಡಿ, ಹನಮಗೌಡ ಪಾಟೀಲ್ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿ ಶಂಕರ ಮೂಲಿ, ಸಂತೋಷ ತೋಟದ ಸೇರಿದಂತೆ ಮತ್ತಿತರರು ಇದ್ದರು.