ಕಿಲ್ಲರ್ ನಾಯಿಗಳಿಗೆ ಬಲೆ ಬೀಸಿದ ನಗರಸಭೆ: ನಿಟ್ಟುಸಿರು ಬಿಟ್ಟ ಪಾಲಕರು.

| Published : Oct 26 2025, 02:00 AM IST

ಕಿಲ್ಲರ್ ನಾಯಿಗಳಿಗೆ ಬಲೆ ಬೀಸಿದ ನಗರಸಭೆ: ನಿಟ್ಟುಸಿರು ಬಿಟ್ಟ ಪಾಲಕರು.
Share this Article
  • FB
  • TW
  • Linkdin
  • Email

ಸಾರಾಂಶ

ಅವಳಿ ನಗರದಲ್ಲಿ ಕಿಲ್ಲರ್ ನಾಯಿಗಳ ಅಟ್ಟಹಾಸ ಮಿತಿಮೀರಿದ್ದು, ನಗರಸಭೆಯು ಉತ್ತರಪ್ರದೇಶದ ನುರಿತ ತಂಡದಿಂದ ನಾಯಿ ಹಿಡಿಯುವ ಕಾರ್ಯಾಚರಣೆ ನಡೆಸಿತು.

ಗದಗ: ಅವಳಿ ನಗರದಲ್ಲಿ ಕಿಲ್ಲರ್ ನಾಯಿಗಳ ಅಟ್ಟಹಾಸ ಮಿತಿಮೀರಿದೆ. ಒಂದು ತಿಂಗಳಲ್ಲಿ ಮೂರು ಮಕ್ಕಳ ಮೇಲೆ ದಾಳಿ ಮಾಡಿ ಗಂಭೀರ ಗಾಯ ಮಾಡಿವೆ. ಈ ಹಿನ್ನೆಲೆಯಲ್ಲಿ ಶನಿವಾರ ನಗರಸಭೆ ಅಧಿಕಾರಿಗಳು ಬೀದಿನಾಯಿಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ನಡೆಸಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬೀದಿ ನಾಯಿಗಳು ಅವಳಿ ನಗರದಲ್ಲಿ ಮಕ್ಕಳು, ವೃದ್ಧರು ಮನೆಬಿಟ್ಟು ಹೊರಬರದಂತೆ ಮಾಡಿದ್ದವು. ಅವಳಿ ನಗರದಲ್ಲಿ ಕಿಲ್ಲರ್ ನಾಯಿಗಳ ಗ್ಯಾಂಗ್‌ನಿಂದ ಜನತೆ ಬೆಚ್ಟಿ ಬಿದ್ದಿದ್ದರು. ಒಂದೇ ತಿಂಗಳಲ್ಲಿ ಮೂರು ಮಕ್ಕಳ ಮೇಲೆ ದಾ‍ಳಿ ಮಾಡಿದ್ದವು. ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿ, ಉತ್ತರ ಪ್ರದೇಶದಿಂದ ನುರಿತ ತಂಡವನ್ನು ಕರೆ ತಂದಿದ್ದು, ಕ್ಷಣಾರ್ಧದಲ್ಲಿ ತಂಡ ನಾಯಿಗಳನ್ನು ಬಲೆಗೆ ಕೆಡವಿತು. ನಾಯಿ ಹಿಡಿಯುವ ಕಾರ್ಯಾಚರಣೆಯನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.

ಬೀದಿ ನಾಯಿಗಳು ಮಕ್ಕಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದವು. ಇದರಿಂದ ಗಂಭೀರ ಗಾಯಗಳಾಗಿದ್ದವು. ಇದರಿಂದ ಮಕ್ಕಳನ್ನು ಮನೆಬಿಟ್ಟು ಹೊರ ಕಳಿಸಲು ಪಾಲಕರು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು.

ನಾಯಿ ದಾಳಿಗಳು

ಫೆ. 5ರಂದು ರಹಮತ್ ನಗರದಲ್ಲಿ 4 ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಮುಖ, ಕತ್ತು, ಎದೆ ಭಾಗದಲ್ಲಿ ಗಾಯಗೊಳಿಸಿದ್ದವು, ಸೆ. 9ರಂದು ಪಂಚಾಳ ನಗರದಲ್ಲಿ 6 ವರ್ಷದ ಬಾಲಕಿ ಮೇಲೆ ದಾಳಿ ಮಾಡಿ ಕಣ್ಣು, ತಲೆ, ಕೈಗೆ ಕಚ್ಚಿದ್ದವು. ಅ. 12ರಂದು ಬೆಟಗೇರಿಯ ಕುರಹಟ್ಟಿ ಪೇಟೆಯಲ್ಲಿ 6 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ್ದವು. ಈಗ ಗದಗ-ಬೆಟಗೇರಿ ಅವಳಿ ನಗರದಲ್ಲಿನ ಬೀದಿ ನಾಯಿಗಳನ್ನು ಹಿಡಿದು, ಅವುಗಳ ಸಂತಾನ ಹರಣ ಮಾಡಲಾಗುತ್ತಿದೆ. ಅಷ್ಟೇ ಅಲ್ಲ ಲಸಿಕೆಯನ್ನೂ ನೀಡಲಾಗುತ್ತಿದೆ.

ಮೊದಲ ಹಂತದಲ್ಲಿ 485 ಬೀದಿ ನಾಯಿಗಳ ಎಬಿಸಿ ಮತ್ತು ಎಆರ್‌ಸಿ ಕಾರ್ಯಕ್ರಮ ಮಾಡಲಾಗಿದ್ದು, ಈಗ ಎರಡನೇ ಹಂತದಲ್ಲಿ ಒಟ್ಟು 615 ಬೀದಿನಾಯಿಗಳಿಗೆ ಎಬಿಸಿ ಮತ್ತು ಎಆರ್‌ಸಿ ಮಾಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ 25 ನಾಯಿಗಳ ಬಲೆ ಹಾಕಲಾಗುತ್ತದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಂದಾಜು 3 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ ಎಂದು ನಗರಸಭೆ ಮಾಡಿದ ಸರ್ವೇಯಲ್ಲಿ ಬಯಲಾಗಿದೆ. ಹೀಗಾಗಿ, ಬೀದಿ ನಾಯಿಗಳ ನಿಯಂತ್ರಣ ಮಾಡಲು ಆಪರೇಷನ್ ಡಾಗ್ ಪ್ಲಾನ್ ಮಾಡಲಾಗಿದೆ. ಶನಿವಾರ ಕುರಹಟ್ಟಿ ಪೇಟೆಯಲ್ಲಿ ಆಪರೇಷನ್ ಡಾಗ್ ಕಾರ್ಯಾಚರಣೆ ಯಶಸ್ವಿಯಾಗಿ ಜರುಗಿತು.

ಕಾರ್ಯಾಚರಣೆಯಲ್ಲಿ ನಗರಸಭೆ ಸದಸ್ಯ ಚಂದ್ರು ಕರಿಸೋಮನಗೌಡ್ರ, ಇಮ್ತಿಯಾಜ್ ಶಿರಹಟ್ಟಿ, ನಗರಸಭೆ ಆಯುಕ್ತ ರಾಜಾರಾಮ್ ಪವಾರ್, ನಗರಸಭೆ ಸಹಾಯಕ ಕಾರ್ಯ ಪಾಲಕ ಅಭಿಯಂತ (ಪರಿಸರ) ಆನಂದ ಬದಿ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಮಕಾಂದಾರ ಸೇರಿದಂತೆ ನಗರಸಭೆ ಸಿಬ್ಬಂದಿ, ಹಾಗೂ ಅನಿಮಲ್ ರೈಟ್ಸ್ ಫಂಡ್ ಏಜೆನ್ಸಿ ಸಿಬ್ಬಂದಿ ಇದ್ದರು.

ಅವಳಿ ನಗರದಲ್ಲಿ ವ್ಯಾಪಕವಾದ ರೀತಿಯಲ್ಲಿ ಬೀದಿ ನಾಯಿಗಳು ಹೆಚ್ಚಾಗಿ ಸಾರ್ವಜನಿಕರು ಭಯ ಪಡುತ್ತಿದ್ದರು. ಈಗ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಎಲ್ಲವನ್ನೂ ಸಂಪೂರ್ಣವಾಗಿ ಹಿಡಿಯುವ ಪ್ರಯತ್ನ ಮಾಡಲಾಗುವುದು ಎಂದು ನಗರಸಭೆ ಪರಿಸರ ಅಭಿಯಂತರರಾದ ಆನಂದ ಬದಿ ಹೇಳಿದ್ದಾರೆ.