ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ/ ಚಿತ್ರದುರ್ಗ
ಭೂಮಿಗೆ ಸೇರಿದ ಬಳಿಕ ಕೊಳೆಯದ ಅಥವಾ ಕರಗದ ಪ್ಲಾಸ್ಟಿಕನ್ನು ಬಳಸುವ ಜೀವನ ಕ್ರಮವನ್ನು ಬದಲಾಯಿಸಿಕೊಳ್ಳಲೇಬೇಕು. ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ಕಮ್ಮಿ ಮಾಡಿ, ಅಂತಿಮವಾಗಿ ನಮ್ಮ ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.ದಾವಣಗೆರೆ ಮತ್ತು ಚಿತ್ರದುರ್ಗಗಳಲ್ಲಿ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಭವಿಷ್ಯಕ್ಕೋಸ್ಕರ ಶಿಕ್ಷಣ ಪಡೆಯುವುದು ಎಷ್ಟು ಮುಖ್ಯವೋ, ಭವಿಷ್ಯಕ್ಕಾಗಿ ಪರಿಸರ ಉಳಿಸುವುದು ಅಷ್ಟೇ ಮುಖ್ಯ. ಇದಕ್ಕೆ ಸಾರ್ವಜನಿಕರ ಮತ್ತು ಸ್ಥಳೀಯ ಆಡಳಿತದ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ ವಾಯುಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ ಕೊಡುಗೆ ನೀಡಿದೆ. ಶಕ್ತಿ ಯೋಜನೆಯಿಂದ ವಿಶೇಷವಾಗಿ ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೋತ್ಸಾಹ ನೀಡಿದಂತಾಗಿದೆ ಎಂದು ತಿಳಿಸಿದರು.ಹಾಲಿನ ಪಾಕೆಟ್ಅನ್ನು ಮೂಲೆಯಲ್ಲಿ ಕತ್ತರಿಸಿ ತುಣುಕನ್ನು ಯಾವುದೇ ರೀತಿಯಲ್ಲಿ ಸಂಸ್ಕರಿಸದೆ ಎಸೆಯಲಾಗುತ್ತದೆ. ಅದು ಭೂಮಿ ಅಥವಾ ಪರಿಸರವನ್ನು ಸೇರುತ್ತಿದೆ. ಪ್ಲಾಸ್ಟಿಕ್ ಕೊಳೆಯುವ ಅಥವಾ ಕರಗುವ ಪದಾರ್ಥವಲ್ಲ. ಪ್ಲಾಸ್ಟಿಕ್ ಪ್ರಪಂಚಕ್ಕೆ ಮಾರಕ. ಈ ಅಪಾಯದಿಂದ ಪಾರಾಗಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಹೇಳಿದರು.
ವನ್ಯ ಸಂರಕ್ಷಣಾ ಕಾಯಿದೆ ಇದ್ದರೂ ಪ್ರತಿ ನಿತ್ಯ ಅರಣ್ಯ ನಾಶವಾಗುತ್ತಿದೆ. ಅರಣ್ಯನಾಶವನ್ನು ತಡೆಯದಿದ್ದರೆ ಮತ್ತು ವಾಯು ಗುಣಮಟ್ಟವನ್ನು ಹೆಚ್ಚಿಸದಿದ್ದರೆ ನಮ್ಮ ಮುಂದಿನ ತಲೆಮಾರಿಗೆ ವಿಷ ಕೊಟ್ಟಂತಾಗುತ್ತದೆ. ಒಂದು ಕಡೆ ಕಾಡು ನಾಶವಾಗುತ್ತಿದೆ. ಇನ್ನೊಂದೆಡೆ, ಗಣಿಗಾರಿಕೆ ಮತ್ತು ಕೈಗಾರಿಕೆಗಳು ಹೆಚ್ಚಾಗುತ್ತಿವೆ. ಕೈಗಾರಿಕೆಗಳ ರಾಸಾಯನಿಕಯುಕ್ತ ನೀರು ನದಿಗಳಿಗೆ ಸೇರಿ ಜಲಮಾಲಿನ್ಯ ಕೂಡ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಇಂದಿರಾರಿಂದ ಮಾಲಿನ್ಯ ಮಂಡಳಿ ಸ್ಥಾಪನೆ:
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು 1974ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿ, ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆದರು. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 50 ವರ್ಷ ಪೂರೈಸಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವುದು ಸುವರ್ಣ ಮಹೋತ್ಸವದ ಗುರಿಯಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.ಇಂದಿರಾ ಗಾಂಧಿ ಅವರು ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪನೆ ಮಾಡಿರುವುದು ಮಾತ್ರವಲ್ಲ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಲವು ಕಾಯಿದೆಗಳನ್ನು ಜಾರಿಗೆ ತಂದರು. 1972ರಲ್ಲಿ ರಾಷ್ಟ್ರೀಯ ಪರಿಸರ ಯೋಜನೆ ಮತ್ತು ಸಮನ್ವಯ ಸಮಿತಿ ರಚಿಸಿದರು. ಅದೇ ವರ್ಷ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ನ್ನು ಜಾರಿಗೆ ತಂದರು. 1973ರಲ್ಲಿ ಅಳಿವಿನಂಚಿನಲ್ಲಿರುವ ಹುಲಿಗಳನ್ನು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಪ್ರಾಜೆಕ್ಟ್ ಟೈಗರ್ ಎಂಬ ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ರೂಪಿಸಿದರು. 1974ರಲ್ಲಿ ಜಲಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದರು. ಅದೇ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿದರು. 1981ರಲ್ಲಿ ವಾಯುಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದರು. ಸುವರ್ಣ ಮಹೋತ್ಸವದ ವೇಳೆ ಈ ಕಾಯಿದೆಗಳ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ ಎಂದು ನರೇಂದ್ರಸ್ವಾಮಿ ವಿವರಿಸಿದರು.
1972ರಲ್ಲಿ ವಿಶ್ವಸಂಸ್ಥೆಯ ಸ್ಟಾಕ್‌ಹೋಮ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಇಂದಿರಾ ಗಾಂಧಿ, ಇಡೀ ಜಗತ್ತಿಗೆ ಮೊದಲ ಬಾರಿಗೆ ಪರಿಸರ ಸಂರಕ್ಷಣೆಯ ಪಾಠ ಮಾಡಿದರು. ಹಾಗಾಗಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ವೇಳೆ ಇಂದಿರಾ ಗಾಂಧಿ ಅವರ ಕೊಡುಗೆಗಳನ್ನು ಸ್ಮರಿಸಿಕೊಳ್ಳಬೇಕಾದುದು ಮತ್ತು ಅವರು ತಂದ ಕಾಯಿದೆಗಳ ಬಗ್ಗೆ ತಿಳಿದುಕೊಳ್ಳುವುದು ಕೂಡ ನಮ್ಮ ಕರ್ತವ್ಯ ಎಂದು ಹೇಳಿದರು.;Resize=(128,128))
;Resize=(128,128))