ಕಬ್ಬಿನ ದರ ನಿಗದಿ ಮಾಡಲು ಸರ್ಕಾರಕ್ಕೆ ರೈತರ ಡೆಡ್‌ಲೈನ್‌

| Published : Nov 06 2025, 02:00 AM IST

ಸಾರಾಂಶ

ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಕಳೆದ ಏಳು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬುಧವಾರ ಬೆಳಗಾವಿ, ವಿಜಯಪುರ ಜಿಲ್ಲೆಯ ಹಲವೆಡೆ ರಸ್ತೆ ತಡೆ ನಡೆಸಿ, ರೈತರು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಈ ಮಧ್ಯೆ, ರೈತರ ಹೋರಾಟಕ್ಕೆ ಪ್ರತಿಪಕ್ಷ ಬಿಜೆಪಿ, ವಕೀಲರ ಸಂಘ, ಕರವೇ ಹಾಗೂ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದು, ಹೋರಾಟದ ಕಿಚ್ಚು ಹೆಚ್ಚಿಸಿದೆ.

ಕಬ್ಬು ಬೆಳೆಗಾರರ ಜೊತೆಗಿನ ಸರ್ಕಾರದ ಸಂಧಾನ ವಿಫಲ

---

ಇಂದು ಸಂಜೆಯೊಳಗೆ ಟನ್‌ ಕಬ್ಬಿಗೆ ₹3500 ದರ ನಿಗದಿಗೆ ಪಟ್ಟು । ಇಲ್ಲವೇ ಹೋರಾಟ ತೀವ್ರಬೇಡಿಕೆ ಈಡೇರದಿದ್ದರೆ ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್‌ । ಸಿಎಂ ಭೇಟಿಗೂ ರೈತರ ನಕಾರ

---

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಕಳೆದ ಏಳು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬುಧವಾರ ಬೆಳಗಾವಿ, ವಿಜಯಪುರ ಜಿಲ್ಲೆಯ ಹಲವೆಡೆ ರಸ್ತೆ ತಡೆ ನಡೆಸಿ, ರೈತರು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಈ ಮಧ್ಯೆ, ರೈತರ ಹೋರಾಟಕ್ಕೆ ಪ್ರತಿಪಕ್ಷ ಬಿಜೆಪಿ, ವಕೀಲರ ಸಂಘ, ಕರವೇ ಹಾಗೂ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದು, ಹೋರಾಟದ ಕಿಚ್ಚು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಸರ್ಕಾರ ಪ್ರತಿಭಟನಾನಿರತ ರೈತರ ಜೊತೆ ಸಂಧಾನಕ್ಕೆ ಮುಂದಾಗಿದ್ದು, ಸರ್ಕಾರದ ಪ್ರತಿನಿಧಿಯಾಗಿ ಸಚಿವ ಎಚ್‌.ಕೆ.ಪಾಟೀಲ ಅವರು ಕಬ್ಬು ಬೆಳೆಗಾರರ ಜೊತೆ ಬುಧವಾರ ಮಾತುಕತೆ ನಡೆಸಿದರು. ಆದರೆ, ರೈತರು ತಮ್ಮ ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದಿದ್ದರಿಂದ ಸಂಧಾನ ಸಭೆ ವಿಫಲಗೊಂಡಿದ್ದು, ಬೇಡಿಕೆ ಈಡೇರಿಕೆಗೆ ರೈತರು ಗುರುವಾರ ಸಂಜೆಯವರೆಗೆ ಡೆಡ್ ಲೈನ್ ನೀಡಿದ್ದಾರೆ. ಬೇಡಿಕೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ ಏಳು ದಿನಗಳಿಂದ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಎಚ್‌.ಕೆ.ಪಾಟೀಲ ಅವರು ಸರ್ಕಾರದ ಪ್ರತಿನಿಧಿಯಾಗಿ ರೈತರೊಂದಿಗೆ ಸಂಧಾನ ನಡೆಸಲು ಇಲ್ಲಿಗೆ ಆಗಮಿಸಿದ್ದರು. ಸಂಜೆ 4.30ರ ವೇಳೆಗೆ ರೈತರೊಂದಿಗೆ ಸಂಧಾನ ಸಭೆ ಆರಂಭಿಸಿದರು.

ತಕ್ಷಣವೇ ಪ್ರತಿಟನ್‌ ಕಬ್ಬಿಗೆ ₹3,500 ದರ ನಿಗದಿ ಮಾಡಿ ಘೋಷಣೆ ಮಾಡಿ, ಕಾರ್ಖಾನೆ ಹಂಗಾಮು ‌ಆರಂಭಿಸಲು ಕ್ರಮ ಕೈಗೊಳ್ಳಬೇಕು. ಉಳಿದ ಬೇಡಿಕೆಗಳನ್ನು ನಾಲ್ಕೈದು ದಿನಗಳ ಬಳಿಕ ಈಡೇರಿಸಬೇಕು ಎಂದು ರೈತರು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರವೊಂದೆ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರು, ಕೇಂದ್ರ ಸರ್ಕಾರದ ಜೊತೆಗೆ ಮಾತನಾಡಬೇಕು. ಇದಕ್ಕಾಗಿ ಕೆಲವೊಂದು ಹೊಸ ಮಸೂದೆಯ ಅವಶ್ಯಕತೆ ಕೂಡ ಇದೆ. ಗುರುವಾರ ಸಂಜೆ ನೀವು ನಿಯೋಗದೊಂದಿಗೆ ಬೆಂಗಳೂರಿಗೆ ಬನ್ನಿ, ಸಿಎಂ ಸಿದ್ದರಾಮಯ್ಯ ಅವರನ್ನು ‌ಭೇಟಿ ಮಾಡಿಸುತ್ತೇನೆ ಎಂದು ಭರವಸೆ ನೀಡಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

ಆದರೆ, ರೈತರು ಇದಕ್ಕೆ ಒಪ್ಪಲಿಲ್ಲ. ನಾವ್ಯಾರೂ ಮುಖ್ಯಮಂತ್ರಿ ಬಳಿ ಬರುವುದಿಲ್ಲ. ನೀವೇ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ, ಗುರುವಾರ ಸಂಜೆಯೊಳಗೆ ನಿರ್ಧಾರ ಪ್ರಕಟಿಸಬೇಕು. ಸರ್ಕಾರದ ನಿರ್ಧಾರ ಸ್ಪಷ್ಟವಾದರೆ ನಾವು ಹೋರಾಟ ನಿಲ್ಲಿಸುತ್ತೇವೆ. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ನ.7 ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೈತರು ಬಿಗಿ ಪಟ್ಟು ಹಿಡಿದಿದ್ದರಿಂದ ಮುಖ್ಯಮಂತ್ರಿ ಜೊತೆ ಚರ್ಚಿಸಿ, ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿ, ಸಚಿವರು ಅಲ್ಲಿಂದ ಹೊರಟರು. ಈ ಮಧ್ಯೆ, ಸಚಿವರು ಮರಳುವಾಗ ರೈತರು ಅವರ ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮುಂದೆ ಹೋಗದಂತೆ ತಡೆಯುವ ಯತ್ನ ಮಾಡಿ, ಕಾರಿನ ಕೆಳಗೆ ಉರುಳಿ ಪ್ರತಿಭಟನೆ ನಡೆಸುವ ಯತ್ನ ಮಾಡಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ಸಚಿವರಿಗೆ ತೆರಳಲು ಅನುವು ಮಾಡಿಕೊಟ್ಟರು.