ಸಾರಾಂಶ
ಮುಂಡಗೋಡ: ಅ.೨ರವರೆಗೆ ಸೇವಾ ಪಾಕ್ಷಿಕ ಎಂಬ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದು, ಸೇವಾ ಚಟುವಟಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ವಿಕಸಿತ ಭಾರತ ಕಟ್ಟಲು ಪ್ರತಿಯೊಬ್ಬರು ಪಣ ತೊಡಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬಿಜೆಪಿ ಮುಂಡಗೋಡ ಮತ್ತು ಪಂಡಿತ್ ಜನರಲ್ ಹಾಸ್ಪಿಟಲ್, ಶಿರಸಿಯ ರಕ್ತ ಕೇಂದ್ರದ ಆಶ್ರಯದಲ್ಲಿ ಬುಧವಾರ ಇಲ್ಲಿಯ ತಾಲೂಕು ಆಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಬಳಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು.ನರೇಂದ್ರ ಮೋದಿ ಆರೋಗ್ಯವಂತ ಮಹಿಳೆ ಸಶಕ್ತ ಪರಿವಾರ ಆರೋಗ್ಯ ಅಭಿಯಾನ ಉದ್ಘಾಟನೆ ಮಾಡಿದ್ದಾರೆ. ಕುಟುಂಬ ಆರೋಗ್ಯವಾಗಿರಬೇಕಾದರೆ ಮಹಿಳೆಯ ಆರೋಗ್ಯ ತೀವ್ರ ಮುಖ್ಯ. ಹಾಗಾಗಿ ಹತ್ತಿರದ ಆಸ್ಪತ್ರೆಗೆ ತೆರಳಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಮೂಲಕ ಸರ್ಕಾರದ ಯೋಜನೆ ಸದುಪಯೋಗಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ಭಾರತ ವಿಶ್ವಗುರು ಆಗಬೇಕೆಂಬ ದೇಶದ ಜನರ ಆಶಯವನ್ನು ಸಾಕಾರಗೊಳಿಸಲಿ. ವಿಕಸಿತ ಭಾರತದ ಸಂಕಲ್ಪದಲ್ಲಿ ನಾವೆಲ್ಲರೂ ಈ ಅಮೃತ ಕಾಲದಲ್ಲಿ ಮುನ್ನಡೆಯುತ್ತಿದ್ದೇವೆ. ೨೦೪೭ಕ್ಕೆ ಭಾರತ ದೇಶ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿರಬೇಕು. ಜಗತ್ತಿಗೆ ನೇತೃತ್ವ ನೀಡುವ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ನರೇಂದ್ರ ಮೋದಿ ಅವರ ನಾಯಕತ್ವದ ಪರಿಚಯ ಇಡೀ ಜಗತ್ತಿಗೆ ಆಗಿದೆ. ಅಭಿವೃದ್ಧಿಯ ವೇಗ ಹೇಗೆ ಹೆಚ್ಚಿದೆ ಎಂಬುದನ್ನು ನೋಡಿದ್ದೇವೆ. ಮುಂಬರುವ ದಿನಗಳಲ್ಲಿ ಹೆಚ್ಚು ಸ್ವದೇಶಿ ವಸ್ತುಗಳನ್ನು ಕೊಂಡುಕೊಂಡು ಜನಸಮುದಾಯದಲ್ಲಿ ಸ್ವದೇಶಿಯ ವಾತಾವರಣವನ್ನು ಸ್ವಾಭಿಮಾನದಿಂದ ಬೆಳೆಸಲು ನಾವೆಲ್ಲ ಮುಂದಾಗಬೇಕಿದೆ ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ್ ಮತ್ತು ಅಶೋಕ ಚಲವಾದಿ, ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ್, ಮುಖಂಡರಾದ ತುಕಾರಾಮ ಇಂಗಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ನೀರಜ್, ತಾಲೂಕು ಆರೋಗ್ಯ ಅಧಿಕಾರಿ ಡಾ. ನರೇಂದ್ರ ಪವಾರ್, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ್, ಬಿಜೆಪಿ ಮುಖಂಡರಾದ ಸಂತೋಷ ತಳವಾರ, ಪಪಂ ಸದಸ್ಯ ಶ್ರೀಕಾಂತ ಸಾನು, ಸಿ.ಕೆ. ಅಶೋಕ, ಗುಡ್ಡಪ್ಪ ತಳವಾರ, ಮಹೇಶ ಹೊಸಕೊಪ್ಪ, ಭರತರಾಜ ಹದಳಗಿ, ವಿಠಲ ಬಾಳಂಬೀಡ, ನಾಗರಾಜ ಬೆಣ್ಣಿ ಇದ್ದರು.