ಸಾರಾಂಶ
ಮಗ್ದುಮ್ ಕಾಲನಿ ಗುಡ್ಡದಲ್ಲಿ ಜಾನುವಾರು ಮೂಳೆ ಸಿಕ್ಕಿದ್ದರೂ ಪುರಸಭೆಯ ಅಧಿಕಾರಿಗಳು ಮೂಳೆ ತಂದು ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿಲ್ಲ.
ಭಟ್ಕಳ: ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ಮಾಡುತ್ತಿರುವ ಕರ್ತವ್ಯಲೋಪ, ಪಕ್ಷಪಾತ ಧೋರಣೆ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಮಂಡಲದಿಂದ ಎಸಿ ಕಾವ್ಯರಾಣಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಭಟ್ಕಳ ಪುರಸಭೆಯಲ್ಲಿ ಹೆಚ್ಚಿನ ಸದಸ್ಯರು ಒಂದು ಕೋಮಿನ ಒಂದು ಖಾಸಗಿ ಸಂಸ್ಥೆಯ ಬೆಂಬಲಿತ ಸದಸ್ಯರಾಗಿದ್ದು, ಇವರು ಪುರಸಭೆಯ ಅಧಿಕಾರಿಗಳ ಮೇಲೆ ಖಾಸಗಿ ಸಂಸ್ಥೆಯ ಇಚ್ಛೆಯಂತೆ ಪ್ರಭಾವ ಬೀರುತ್ತಿರುವುದು ಗಮನಕ್ಕೆ ಬಂದಿದೆ. ಪುರಸಭೆಯ ಮುಖ್ಯಾಧಿಕಾರಿ ಒಂದು ಕೋಮಿನ ಸದಸ್ಯರ ಅಣತಿಯಂತೆ ಕರ್ತವ್ಯ ನಿರ್ವಹಿಸುತ್ತಿರುವುದು ಇತ್ತೀಚಿನ ಕೆಲವು ಘಟನೆಯಿಂದ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.ಮಗ್ದುಮ್ ಕಾಲನಿ ಗುಡ್ಡದಲ್ಲಿ ಜಾನುವಾರು ಮೂಳೆ ಸಿಕ್ಕಿದ್ದರೂ ಪುರಸಭೆಯ ಅಧಿಕಾರಿಗಳು ಮೂಳೆ ತಂದು ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಈ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ದಾರೆ. ಹಳೇ ಮೀನು ಮಾರುಕಟ್ಟೆ ಬಗ್ಗೆ ಕೆಲವರು ಅಪಪ್ರಚಾರ ಮತ್ತು ಮೀನು ಮಾರುವ ಜಾಗದಲ್ಲಿ ಕಸದ ರಾಶಿ ಹಾಕಿದ್ದರೂ ಪುರಸಭೆಯ ಅಧಿಕಾರಿಗಳು ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ. ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಗೋವಿಂದ ನಾಯ್ಕ, ಈಶ್ವರ ಎನ್. ನಾಯ್ಕ, ಶ್ರೀಕಾಂತ ನಾಯ್ಕ, ಸುಬ್ರಾಯ ದೇವಡಿಗ, ಕೇದಾರ ಕೊಲ್ಲೆ, ರಾಜೇಶ ನಾಯ್ಕ, ಶೇಷಗಿರಿ ನಾಯ್ಕ ಇದ್ದರು.
ಭಟ್ಕಳ ಬಿಜೆಪಿಯಿಂದ ಎಸಿ ಕಾವ್ಯರಾಣಿಗೆ ಮನವಿ ಸಲ್ಲಿಸಲಾಯಿತು.