ಸಾರಾಂಶ
ರೀಲ್ಸ್‌ನ ಅವಧಿ ಕನಿಷ್ಠ 30 ಸೆಕೆಂಡ್‌ಗಳಿಂದ ಗರಿಷ್ಠ 1 ನಿಮಿಷದ ಒಳಗೆ ಇರಬೇಕು. ಒಬ್ಬ ಸ್ಪರ್ಧಿಗೆ ಒಂದು ರೀಲ್‌ಗೆ ಮಾತ್ರ ಅವಕಾಶವಿದ್ದು, ಕನ್ನಡ, ತುಳು ಅಥವಾ ಆಂಗ್ಲಭಾಷೆಗಳಲ್ಲಿ ನಿರ್ಮಿಸಬಹುದಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಬಗ್ಗೆ ಜಾಗೃತಿ ಮೂಡಿಸುವಂತಹ ಸೋಶಿಯಲ್ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆ ಆಯೋಜಿಸಲಾಗಿದೆ.ಸ್ಪರ್ಧೆಯು ಏ.19ರಿಂದ ಮೇ 6ರ ವರೆಗೆ ನಡೆಯಲಿದೆ. ರೀಲ್ಸ್‌ನ ಅವಧಿ ಕನಿಷ್ಠ 30 ಸೆಕೆಂಡ್‌ಗಳಿಂದ ಗರಿಷ್ಠ 1 ನಿಮಿಷದ ಒಳಗೆ ಇರಬೇಕು. ಒಬ್ಬ ಸ್ಪರ್ಧಿಗೆ ಒಂದು ರೀಲ್‌ಗೆ ಮಾತ್ರ ಅವಕಾಶವಿದ್ದು, ಕನ್ನಡ, ತುಳು ಅಥವಾ ಆಂಗ್ಲಭಾಷೆಗಳಲ್ಲಿ ನಿರ್ಮಿಸಬಹುದಾಗಿದೆ.
ಈ ರೀಲ್ಸ್ ಮತದಾರರಿಗೆ ಮತದಾನ ಕುರಿತು ಅರಿವು ಹಾಗೂ ಪ್ರೇರಣೆ ಮೂಡಿಸುವಂತಿರಬೇಕು. ರೀಲ್ಸ್ ಯಾವುದೇ ರಾಜಕೀಯ ವ್ಯಕ್ತಿ, ಪಕ್ಷ, ಚಿಹ್ನೆ, ಅಭ್ಯರ್ಥಿಗಳ ಬಗ್ಗೆ ದೃಶ್ಯವನ್ನು ಒಳಗೊಂಡಿರಬಾರದು, ಯಾವುದೇ ಧಾರ್ಮಿಕ ಸ್ಥಳಗಳನ್ನು ತೋರಿಸಬಾರದು. ಸಂಭಾಷಣೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಾರದು. ರೀಲ್‌ನ ಜಿಲ್ಲಾಡಳಿತ, ಸ್ವೀಪ್ ಸಮಿತಿ, ಉಡುಪಿ ಜಿಲ್ಲೆ ಇತ್ಯಾದಿಗಳ ಹೆಸರು, ಲೇಬಲ್, ಟೆಂಪ್ಲೇಟ್ ಹಾಗೂ ಬ್ಯಾನರ್ ಇತ್ಯಾದಿಗಳನ್ನು ಹಾಕಬಾರದು. ಆದರೆ, ‘ಚುನಾವಣಾ ಪರ್ವ, ದೇಶದ ಗರ್ವ’ ಎಂಬ ಚುನಾವಣಾ ಘೋಷಣಾ ವಾಕ್ಯವನ್ನು ರೀಲ್‌ನ ಅಂತ್ಯದಲ್ಲಿ ಕಡ್ಡಾಯವಾಗಿ ಹಾಕಿರಬೇಕು.ರೀಲ್‌ನಲ್ಲಿ ಭಾಗವಹಿಸುವ ಕಲಾವಿದರು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರಬಾರದು. ಸ್ಪರ್ಧಾರ್ಥಿಗಳು ರೀಲನ್ನು ಏ.19 ರಂದು ಬೆಳಗ್ಗೆ 10 ಗಂಟೆಯ ನಂತರ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ.
ಯಾವ ರೀಲನ್ನು ಅತೀ ಹೆಚ್ಚು ವೀಕ್ಷಕರು ಲೈಕ್, ಶೇರ್ ಮಾಡಿರುತ್ತಾರೋ ಅವುಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಆಯ್ಕೆ ಮಾಡಲಾಗುವುದು.ಯಾವುದೇ ರೀತಿಯಲ್ಲಿ ಕಾಪಿರೈಟ್ ಆ್ಯಕ್ಟ್ ಉಲ್ಲಂಘನೆ ಆಗುವಂತಹ ಸಂಗೀತ, ಇನ್ನಿತರ ಆಡಿಯೋ ಅಥವಾ ವಿಡಿಯೋ ಅಳವಡಿಸಿರುವ ರೀಲ್ಸ್‌ಗಳಿಗೆ ಅವಕಾಶ ಇಲ್ಲ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾ ಸ್ವೀಪ್ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.