ರೈತ ಸಮುದಾಯದ ಜೀವನಾಡಿಯಾದ ಧರ್ಮಾ ಜಲಾಶಯದ ಕಾಲುವೆಯ ದುರಸ್ತಿ ಹಾಗೂ ಹೂಳೆತ್ತುವ ಕಾಮಗಾರಿಯನ್ನು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಬೇಕು. ಗುಣಮಟ್ಟವನ್ನೂ ಕಾಯ್ದುಕೊಳ್ಳಬೇಕು ಎಂದು ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹಾನಗಲ್ಲ:ರೈತ ಸಮುದಾಯದ ಜೀವನಾಡಿಯಾದ ಧರ್ಮಾ ಜಲಾಶಯದ ಕಾಲುವೆಯ ದುರಸ್ತಿ ಹಾಗೂ ಹೂಳೆತ್ತುವ ಕಾಮಗಾರಿಯನ್ನು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಬೇಕು. ಗುಣಮಟ್ಟವನ್ನೂ ಕಾಯ್ದುಕೊಳ್ಳಬೇಕು ಎಂದು ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಶುಕ್ರವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಜರುಗಿದ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ರೈತರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಎಲ್.ಜಿ.ರಾಕೇಶ್ ವಿವರ ನೀಡಿ, ಧರ್ಮಾ ಕಾಲುವೆಯ ತೂಬುಗಳ ದುರಸ್ತಿ, ಕಾಲುವೆ ದುರಸ್ತಿ, ಹೂಳೆತ್ತುವುದು, ಜಂಗಲ್ ಕಟಾವು, 16 ಕಿಮಿಗಳಷ್ಟು ಸರ್ವಿಸ್ ರಸ್ತೆ ದುರಸ್ತಿ ಕಾಮಗಾರಿಗಳಿಗಾಗಿ 50 ಕೋಟಿ ರು. ಮಂಜೂರಾಗಿದೆ. ಜನವರಿಯಿಂದ ಕಾಮಗಾರಿ ಆರಂಭಗೊಳ್ಳುತ್ತಿದೆ. ನಿಗದಿತ ಅವಧಿಯಲ್ಲೇ ಕೆಲಸ ಮುಗಿಸುವ ಉದ್ದೇಶದಿಂದ ಪ್ರತಿ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಕಾಮಗಾರಿಗೆ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಲಾಗಿದೆ. ಮೂರು ತಿಂಗಳ ಕಾಲಾವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಹೀಗಾಗಿ ಧರ್ಮಾ ಅಚ್ಚುಕಟ್ಟು ಪ್ರದೇಶದ ರೈತರ ಭೂಮಿಗೆ ಈ ಬಾರಿಯ ಬೇಸಿಗೆ ಹಂಗಾಮಿನಲ್ಲಿ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು. ಕಳೆದ ಮುಂಗಾರಿನಲ್ಲಿ ಸತತ ಮಳೆಯಿಂದಾಗಿ ಬೆಳೆ ಕಳೆದುಕೊಂಡಿದ್ದೇವೆ. ಕಳೆದ ವರ್ಷವೂ ಜಲಾಶಯದ ನೀರು ಕೊನೆಯ ಗ್ರಾಮಗಳಿಗೆ ತಲುಪಲಿಲ್ಲ. ಈ ಬೇಸಿಗೆ ಹಂಗಾಮಿಗಾಗಿ ಈಗಾಗಲೇ ಗೋವಿನಜೋಳ ಬಿತ್ತನೆ ಮಾಡಿದ್ದೇವೆ. ಈಗಲೂ ನೀರು ಹರಿಸದಿದ್ದರೆ ಹೇಗೆ? ಈ ವರ್ಷ ನೀರು ಕೊಡಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, 2019ರಲ್ಲಿ ಅತಿವೃಷ್ಟಿಯಿಂದಾಗಿ ಕಾಲುವೆಯ ಕೆಲವೆಡೆ ಕೊರೆತ ಉಂಟಾಗಿ ಕಿತ್ತು ಹೋಗಿದ್ದವು. ತಾಲೂಕಿನಾದ್ಯಂತ ಕೆರೆ-ಕಟ್ಟೆಗಳು ಒಡೆದುಹೋಗಿದ್ದವು. ಆ ಸಂದರ್ಭದಲ್ಲಿ ಅನುದಾನವೂ ಲಭ್ಯವಿರಲಿಲ್ಲ. ಹೀಗಾಗಿ ಕಾಮಗಾರಿ ಕೈಗೊಳ್ಳಲೂ ಇದುವರೆಗೆ ಸಾಧ್ಯವಾಗಿಲ್ಲ. ಐದಾರು ವರ್ಷಗಳಿಂದ ಕಾಮಗಾರಿ ಕೈಗೊಳ್ಳುವಂತೆ ರೈತಸಂಘ ಒತ್ತಡ ಹೇರುತ್ತಲೇ ಬಂದಿದ್ದರ ಪರಿಣಾಮವಾಗಿ ಇದೀಗ ಹಣ ಮಂಜೂರಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಕೆರೆ-ಕಟ್ಟೆಗಳು ಹಾಗೂ ಕಾಲುವೆಯನ್ನು ದುರಸ್ತಿಗೊಳಿಸಲು ರೈತರು ಒಟ್ಟಾಗಿ ಸಹಕರಿಸೋಣ. ಈ ಬಾರಿ ಒಂದು ಫಸಲು ಬೆಳೆಯುವುದನ್ನು ನಿಲ್ಲಿಸಿದರೆ, ಮುಂದಿನ ಹತ್ತಾರು ವರ್ಷಗಳ ಕಾಲ ನೀರಿನ ಚಿಂತೆ ಇರುವುದಿಲ್ಲ. ಕಾಲುವೆ ಹೂಳು ತೆಗೆದು ದುರಸ್ತಿಗೊಳಿಸಿದರೆ ಕೊನೆಯ ಭಾಗದ ಗ್ರಾಮಗಳವರೆಗೂ ನೀರು ತಲುಪುವುದಕ್ಕೆ ಸಾಧ್ಯವಾಗುತ್ತದೆ ಎಂದು ಎಲ್ಲ ರೈತರಿಗೆ ಮನವಿ ಮಾಡಿ ರೈತರ ಮನವೊಲಿಸಿದರು. ರೈತ ಮುಖಂಡರಾದ ರಾಜಣ್ಣ ಗೌಳಿ, ರುದ್ರಪ್ಪ ಹಣ್ಣಿ ಮಾತನಾಡಿ, ಅಕ್ಕಿಆಲೂರಿನ ಕೆರೆಗೆ ಗ್ರಾಮದ ಸಂತೆಯ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ನೀರು ಮಲಿನಗೊಂಡು, ಕೆರೆಯ ಪಕ್ಕದಲ್ಲಿರುವ ಕಾಲೇಜುಗಳಿಗೆ ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ದುರ್ವಾಸನೆ ಬೀರುತ್ತಿದೆ. ಕೂಡಲೇ ಇದನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಮಾತನಾಡಿ, ಕಾಮಗಾರಿ ಬೇಗ ಆರಂಭಿಸಿ ಬೇಗ ಪೂರ್ಣಗೊಳಿಸಬೇಕು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವಂತಿಲ್ಲ. ಕಳಪೆ ಕಾಮಗಾರಿ ನಡೆದರೆ ಅಧಿಕಾರಿಗಳನ್ನೆ ಹೊಣೆಯಾಗಿಸಲಾಗುವುದು. ರೈತರು ಕಾಮಗಾರಿಗೆ ಎಲ್ಲ ರೀತಿಯ ಸಹಕಾರ ನೀಡಿದರೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಾಗುತ್ತದೆ. ನೀರಾವರಿ ಅಧಿಕಾರಿಗಳು ಬೇರೆಲ್ಲ ಕೆಲಸಗಳನ್ನೂ ಬದಿಗಿಟ್ಟು, ಗುತ್ತಿಗೆದಾರರ ಸಂಪರ್ಕದಲ್ಲಿದ್ದು, ಸಮರ್ಪಕವಾಗಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ನಿಗಾ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ಎಸ್.ರೇಣುಕಾ, ನೀರಾವರಿ ಇಲಾಖೆ ಎಇಇ ಎನ್.ಗಿರೀಶ, ತಾಪಂ ಇಒ ಪರಶುರಾಮ ಪೂಜಾರ, ಕೃಷಿ ಇಲಾಖೆ ಎಡಿಎ ಸಿ.ಟಿ.ಸುರೇಶ್, ಪುರಸಭೆ ಮುಖ್ಯಾಧಿಕಾರಿ ವೈ.ಕೆ.ಜಗದೀಶ್, ರೈತ ಮುಖಂಡರಾದ ವೀರೇಶ ಬೈಲವಾಳ, ಬಿ.ಸಿ.ಪಾಟೀಲ, ಸೋಮಣ್ಣ ಜಡೆಗೊಂಡರ, ಹನುಮಂತಪ್ಪ ತಹಸೀಲ್ದಾರ್, ಶ್ರೀಧರ ಮಲಗುಂದ, ರಾಮನಗೌಡ ಪಾಟೀಲ, ಮಂಜುನಾಥ ಕಬ್ಬೂರ ಇತರರು ಇದ್ದರು.