ವ್ಯಾಪಾರ ದೇಶದ ಅಭಿವೃದ್ಧಿಯಲ್ಲಿ ಕೃಷಿಯಂತೇ ಪ್ರಮುಖ ಸ್ಥಾನ ಪಡೆದಿದೆ. ಒಂದು ಕಾಲಕ್ಕೆ ವ್ಯಾಪಾರ ಎಂದರೆ ನಕಾರಾತ್ಮಕ ಭಾವನೆ ಇತ್ತು. ವ್ಯಾಪಾರದ ಬಗ್ಗೆ ಇರುವ ತಪ್ಪು ಕಲ್ಪನೆ ನಿವಾರಣೆಯಾಗಬೇಕು.
ಧಾರವಾಡ:
ವಾಣಿಜ್ಯದ ಜತೆಗೆ ಆಡಳಿತ ಸಮರ್ಥವಾಗಿದ್ದರೆ, ಅಭಿವೃದ್ಧಿಗೆ ಒಂದು ದೊಡ್ಡ ಶಕ್ತಿ ಬಂದಂತಾಗುತ್ತದೆ. ವ್ಯಾಪಾರ, ವಾಣಿಜ್ಯ ರಾಷ್ಟ್ರದ ಪ್ರಗತಿಯ ಜೀವನಾಡಿಯಾಗಿದ್ದು ನಾಗರೀಕತೆಯ ಉದಯದೊಂದಿಗೆ ವ್ಯಾಪಾರ ಬೆಳೆದ ಬಂದಿದೆ ಎಂದು ತುಮಕೂರಿನ ತಾಂತ್ರಿಕ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಎಂ.ಆರ್. ಸೊಲ್ಲಾಪುರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ವಾಣಿಜ್ಯ ಮತ್ತು ಆಡಳಿತ ಮಂಟಪದ ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆ ಉದ್ಘಾಟಿಸಿದ ಅವರು, ಒಂದು ರೀತಿ ನಮ್ಮ ಇಡೀ ಬದುಕೇ ವಾಣಿಜ್ಯವಾಗಿದೆ. ಉಪಯೋಗಿಸುವ ಎಲ್ಲ ವಸ್ತುಗಳು ವಾಣಿಜ್ಯದಿಂದಲೇ ಉತ್ಪಾದನೆಯಾಗಿವೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ಸಂಸ್ಥೆಯ ಡೀನ್ ಪ್ರೊ. ಎನ್. ರಾಮಾಂಜನೇಯಲು ಉಪನ್ಯಾಸ ನೀಡಿ, ವ್ಯಾಪಾರ ದೇಶದ ಅಭಿವೃದ್ಧಿಯಲ್ಲಿ ಕೃಷಿಯಂತೇ ಪ್ರಮುಖ ಸ್ಥಾನ ಪಡೆದಿದೆ. ಒಂದು ಕಾಲಕ್ಕೆ ವ್ಯಾಪಾರ ಎಂದರೆ ನಕಾರಾತ್ಮಕ ಭಾವನೆ ಇತ್ತು. ವ್ಯಾಪಾರದ ಬಗ್ಗೆ ಇರುವ ತಪ್ಪು ಕಲ್ಪನೆ ನಿವಾರಣೆಯಾಗಬೇಕು. ವ್ಯಾಪಾರವು ಇಂದು ಜನರ ಬೇಡಿಕೆಗಳಿಗೆ ತಕ್ಕಂತೆ ಸರಕು ಹಾಗೂ ಸೇವೆ ಪೊರೈಸುವುದಾಗಿದೆ. ಭಾರತದಲ್ಲಿ ಕೃಷಿ ಕ್ಷೇತ್ರದಿಂದ ಬರುವ ಆದಾಯ ಕಡಿಮೆ ಇದ್ದು, ವ್ಯಾಪಾರದಿಂದಲೇ ಅಧಿಕ ವರಮಾನ ಬರುತ್ತಿದೆ. ಜಾಗತೀಕರಣದ ಪ್ರಭಾವದಿಂದ ಇಂದು ಇಡೀ ವಿಶ್ವವೇ ಒಂದು ಮಾರುಕಟ್ಟೆಯಾಗಿದ್ದು, ಬ್ಯಾಂಕಿಂಗ್, ಆರೋಗ್ಯ, ಶಿಕ್ಷಣ, ಆಚಾರ-ವಿಚಾರ, ಸಂಸ್ಕೃತಿಯಲ್ಲೂ ವಾಣಿಜ್ಯವಿದೆ ಎಂದು ಹೇಳಿದರು.ದೇಶ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು. ಕೋಟಿ ಕೋಟಿ ದುಡಿಯುವ ವರ್ಗಕ್ಕೆ ಉದ್ಯೋಗ ಸಿಗಬೇಕು. ಸಂಪತ್ತಿನ ಸಮಾನ ಹಂಚಿಕೆಯಾಗಬೇಕು. ರೈತರ ಉತ್ಪಾದನೆಗಳಿಗೆ ಮೌಲ್ಯ ವರ್ಧನೆಯಾಗಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಆರೋಗ್ಯ ದೊರೆಯುವಂತಾಗಬೇಕು ಎಂದ ಅವರು, ವ್ಯಾಪಾರದಿಂದ ಮಾತ್ರ ಉತ್ತಮ ದೇಶದ ಅಭಿವೃದ್ಧಿ ಸಾಧ್ಯ. ಸುಸ್ಥಿರ ಅಭಿವೃದ್ಧಿಯಿಂದ ಭವಿಷ್ಯದ ಪೀಳಿಗೆಗೆ ನಮ್ಮ ಸಂಪನ್ಮೂಲಗಳು ಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಬಸವಪ್ರಭು ಹೊಸಕೇರಿ, ವಾಣಿಜ್ಯ ಮತ್ತು ಆಡಳಿತ ಮಂಟಪವನ್ನು ನಮ್ಮ ಸಂಘವು ದೂರದೃಷ್ಟಿಯ ಸುಸ್ಥಿರ ಚಿಂತನೆಯಿಂದ ರಚಿಸಿದೆ. ದೇಶದ ಅಭಿವೃದ್ಧಿ ಸೂಚಕದಲ್ಲಿ ಮನೆ ಕೆಲಸದ ಸ್ತ್ರಿಯರನ್ನು ಪರಿಗಣಿಸದೇ ಇರುವುದು ವಿಪರ್ಯಾಸ. ಇಂದು ಸ್ಮಾರ್ಟ್ ಬಜಾರಗಳು ಬಂದು ಸಣ್ಣ ವ್ಯಾಪಾರಿಗಳ ಬದುಕು ಚಿಂತಾಜನಕಸ್ಥಿತಿಗೆ ಬಂದಿದೆ. ವ್ಯಾಪಾರದಲ್ಲಿ ನೀತಿ ಮುಖ್ಯ ಎಂದು ಗಾಂಧೀಜಿ ತನ್ನ ಸಪ್ತಪಾತಕದಲ್ಲಿ ಹೇಳಿದ್ದು ಸತ್ಯವಿದೆ ಎಂದು ಹೇಳಿದರು.ಸಿದ್ಧರಾಮ ಹಿಪ್ಪರಗಿ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ, ಡಾ. ಪತ್ರೆಮ್ಮ ಧಾರವಾಡ, ಶಂಕ್ರಮ್ಮ ಹೂಲಿಕಟ್ಟಿ, ಶಂಕರ ಹಲಗತ್ತಿ, ಸತೀಶ ತುರಮರಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ ಮತ್ತಿತರರು ಇದ್ದರು.