ಕುಂಭಾಪುರ ಫಾರ್ಮ್‌ನಲ್ಲಿ ನಿರ್ಮಾಣವಾಗುತ್ತಿರುವ ಮಾವು ಅಭಿವೃದ್ಧಿ ಕೇಂದ್ರದ ಇಂಟಿಗ್ರೇಟೇಡ್ ಪ್ಯಾಕ್ ಹೌಸ್ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬುಧವಾರ ಪರಿಶೀಲಿಸಿದರು.

ಧಾರವಾಡ: ನಗರದ ಹೊರವಲಯದ ಕುಂಭಾಪುರ ಫಾರ್ಮ್‌ನಲ್ಲಿ ನಿರ್ಮಾಣವಾಗುತ್ತಿರುವ ಮಾವು ಅಭಿವೃದ್ಧಿ ಕೇಂದ್ರದ ಇಂಟಿಗ್ರೇಟೇಡ್ ಪ್ಯಾಕ್ ಹೌಸ್ (ಸಮಗ್ರ ಉಪಚಾರ ಘಟಕ) ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬುಧವಾರ ಪರಿಶೀಲಿಸಿದರು.

ಘಟಕದ ಕಟ್ಟಡ ಕಾಮಗಾರಿ ವೀಕ್ಷಿಸಿದ ಅವರು, ಕಟ್ಟಡದ ವಿವರ, ಅಳವಡಿಕೆಯಾಗಲಿರುವ ಯಂತ್ರೋಪಕರಣ ಹಾಗೂ ಅವುಗಳ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ, ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ, ರೈತರ ಬಳಕೆಗೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಕಟ್ಟಡದ ಮುಂದಿನ ಆವರಣಕ್ಕೆ ಫೇವರ್ಸ್, ಚಾವಣಿ ಅಳವಡಿಕೆ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನಕ್ಕೆ ಅಗತ್ಯ ಕ್ರಿಯಾಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಬೇಕು. ಅಲ್ಲದೇ, ಕಟ್ಟಡದ ಎದುರಿಗಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಮಾವು ಬೆಳೆಗಾರರ ಬಳಗದ ಗೌರವಾಧ್ಯಕ್ಷ ಡಾ. ರಾಜೇಂದ್ರ ಪೋದ್ದಾರ, ಉಪಾಧ್ಯಕ್ಷ ಪ್ರಮೋದ ಗಾಂವ್ಕರ್ ಅವರು ಮಾವು ಅಭಿವೃದ್ಧಿ ಕೇಂದ್ರಕ್ಕೆ ಇನ್ನಷ್ಟು ಭೂಮಿ, ಅನುದಾನ ಒದಗಿಸಬೇಕು. ಧಾರವಾಡದ ಅಲ್ಫಾನ್ಸೋ ಮಾವು ಪ್ರಸಿದ್ಧಿಗೊಳಿಸಲು, ರಫ್ತು ಮಾಡಲು ಹಾಗೂ ಬೆಳೆಗಾರರ ಆರ್ಥಿಕ ಅಭಿವೃದ್ಧಿಗಾಗಿ ಇನ್ನಷ್ಟು ಸೌಕರ್ಯ ಕಲ್ಪಿಸಬೇಕು ಎಂದರು.

ಮಾವು ಅಭಿವೃದ್ಧಿ ಕೇಂದ್ರದ ಉಪನಿರ್ದೇಶಕ ಸಂತೋಷ ಸಪ್ಪಂಡಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನೀಯರ್ ವಿಜಯಕುಮಾರ, ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ರಾಘವೇಂದ್ರ, ಸಹಾಯಕ ಎಂಜಿನೀಯರ್ ವಿಜಯ ಮಹಾಂತೇಶ, ಗುತ್ತಿಗೆದಾರ ರಾಜು ದೊಡಮನಿ ಉಪಸ್ಥಿತರಿದ್ದರು.