ಗದಗ: ಹರಿಹರದ ವೀರಶೈವ ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿಯವರು ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪದಡಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಾಗಿದೆ.

ಲಕ್ಷ್ಮೇಶ್ವರ ತಾಲೂಕಿನ ಶ್ಯಾಬಳ ಗ್ರಾಮದ ಮಹಿಳೆಯೊಬ್ಬರು ಈ ದೂರು ನೀಡಿದ್ದು, 2021ರಿಂದ 2024ರ ಅವಧಿಯಲ್ಲಿ ತಮ್ಮ ಮಗ ಹಾಗೂ ಇತರ ಬಾಲಕರ ಮೇಲೆ ಸ್ವಾಮೀಜಿಯವರು ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ.

​ದೂರಿನಲ್ಲಿ, ಸಂತ್ರಸ್ತ ಬಾಲಕನು ವಿದ್ಯಾಭ್ಯಾಸಕ್ಕಾಗಿ ಮಠದ ವಸತಿಯಲ್ಲಿದ್ದಾಗ, ಸ್ವಾಮೀಜಿಯವರು ಸ್ನಾನಗೃಹದಲ್ಲಿ ಬಾಲಕರನ್ನು ಬೆತ್ತಲೆಗೊಳಿಸಿ ಅವರಿಂದ ಮಸಾಜ್ ಮಾಡಿಸಿಕೊಳ್ಳುವುದು ಹಾಗೂ ಮಕ್ಕಳ ಗುಪ್ತಾಂಗಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸುತ್ತಿದ್ದರು. ಈ ಕೃತ್ಯವನ್ನು ಪ್ರತಿರೋಧಿಸಿದ ಮಕ್ಕಳಿಗೆ ದೈಹಿಕವಾಗಿ ಹಲ್ಲೆ ನಡೆಸಿ, ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕುತ್ತಿದ್ದರು.

ಅಲ್ಲದೆ ಮಕ್ಕಳಿಗೆ ಸರಿಯಾಗಿ ಊಟ ನೀಡದೆ ಪೀಡಿಸುತ್ತಿದ್ದರೆಂದು ದೂರಿನಲ್ಲಿ ವಿವರಿಸಲಾಗಿದೆ. ಪೊಲೀಸರು ಪೋಕ್ಸೋ ಕಾಯ್ದೆಯ ವಿವಿಧ ಕಲಂ ಹಾಗೂ ಜೀವ ಬೆದರಿಕೆ (506), ಹಲ್ಲೆ(323) ಪ್ರಕರಣದಡಿ ಮೊಕದ್ದಮೆ ಹೂಡಿದ್ದಾರೆ.

ಸದ್ಯ ಲಕ್ಷ್ಮೇಶ್ವರ ಪಿಎಸ್‌ಐ ಟಿ.ಕೆ. ರಾಠೋಡ್ ಪ್ರಕರಣದ ತನಿಖೆ ಕೈಗೊಂಡಿದ್ದು, ಪ್ರಕರಣ ಈಗ ಹರಿಹರ ಠಾಣೆಗೆ ವರ್ಗಾವಣೆಯಾಗಿದೆ.ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳ ವಿರುದ್ಧ ಕ್ರಮ


ಗದಗ: ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಅಧಿಕೃತ ಅಥವಾ ಅನುಮೋದನೆ ಪಡೆಯದೇ ಇರುವ ಅನಧಿಕೃತ ಹೋಂ ಸ್ಟೇಗಳು ಹಾಗೂ ರೆಸಾರ್ಟ್‌ಗಳು ಅನಧಿಕೃತ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಈ ಹೋಂಸ್ಟೇ ಹಾಗೂ ರೆಸಾರ್ಟ್‌ಗಳನ್ನು ಕಾನೂನುಬದ್ಧವಾಗಿ ಮುಂದುವರಿಸಲು ಆಸಕ್ತಿ ಇರುವ ಮಾಲೀಕರು, ಅಗತ್ಯ ದಾಖಲೆಗಳೊಂದಿಗೆ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಇವರನ್ನು ಸಂಪರ್ಕಿಸಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಅಂತಹ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.