ಸಾರಾಂಶ
ಸುವರ್ಣ ವಿಧಾನಪರಿಷತ್ತು : ಕಾವೇರಿ ನದಿಗೆ ಒಳಚರಂಡಿ ನೀರು, ಘನ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಹಾಗೂ ಇತರೆ ಸ್ವರೂಪದ ನೀರು ಸೇರ್ಪಡೆಗೊಂಡು ಕಲುಷಿತವಾಗುತ್ತಿದ್ದು, ಇದನ್ನು ತಡೆಯಲು ತಜ್ಞರ ಸಮಿತಿ ನೀಡಿರುವ ವರದಿ ಶಿಫಾರಸುಗಳನ್ನು ಭಾಗಿದಾರ ಇಲಾಖೆ, ಮಂಡಳಿಗಳ ಮುಖ್ಯಸ್ಥರ ಜೊತೆ ಚರ್ಚಿಸಿ ಸಮಗ್ರ ಕಾರ್ಯನೀತಿ ರೂಪಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಸೋಮವಾರ ಬಿಜೆಪಿಯ ಎಂ.ಪಿ.ಕುಶಾಲಪ್ಪ (ಸುಜಾ) ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂದಿನ ಆರು ತಿಂಗಳ ಅವಧಿಯಲ್ಲಿ ನದಿ ನೀರಿಗೆ ತ್ಯಾಜ್ಯ ನೀರು ಸೇರ್ಪಡೆಯಾಗದಂತೆ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಾವೇರಿ ನದಿ ಪಾತ್ರದಲ್ಲಿ ಒಂದು ಪಾಲಿಕೆ, 5 ನಗರಸಭೆ, 8 ಪುರಸಭೆ ಸೇರಿ ಪಟ್ಟಣ ಪಂಚಾಯಿತಿ, 110 ಹಳ್ಳಿಗಳು ಬರುತ್ತವೆ. ಹೀಗಾಗಿ ನದಿ ನೀರು ಕಲುಷಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಮೇಲೆ ಹೆಚ್ಚಿರುತ್ತದೆ ಎಂದರು.
ತಜ್ಞರ ಸಮಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಮಾಲಿನ್ಯ ನಿಯಂತ್ರಿಸಲು ಹಾಗೂ ತಡೆಯಲು ತಾಂತ್ರಿಕ ಸಮಿತಿ ಅಲ್ಪಾವಧಿ, ದೀರ್ಘಾವದಿ ಕ್ರಿಯಾ ಯೋಜನೆ ಸೇರಿ ವಿವಿಧ ಶಿಫಾರಸು ಮಾಡಿದೆ. ಇವುಗಳ ಅನುಷ್ಠಾನ ಸಂಬಂಧ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಆರ್‌ಡಿಪಿಆರ್, ಕಂದಾಯ, ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಗ್ರ ನೀತಿ ರೂಪಿಸಲಾಗುವುದು ಎಂದು ಸಚಿವರು ಹೇಳಿದರು.