ಅರಣ್ಯ-ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

| Published : Dec 17 2024, 01:00 AM IST

ಅರಣ್ಯ-ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಸಾಗುವಳಿದಾರರಿಗೆ ಹಕ್ಕುಪತ್ರ ನೀಡದೆ ವಂಚಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಬಳ್ಳಾರಿ: ಅರಣ್ಯ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ರೈತ ಸಂಘದ ಸಂಡೂರು ತಾಲೂಕು ಘಟಕದ ಸದಸ್ಯರು ಹಾಗೂ ಬಗರ್‌ ಹುಕುಂ ಸಾಗುವಳಿದಾರರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ರಾಜ್ಯಾದ್ಯಂತ ಅರಣ್ಯ ಹಕ್ಕು ಕಾಯ್ದೆಯಡಿ 2,84,625ಕ್ಕೂ ಹೆಚ್ಚು ಅರಣ್ಯ ಭೂ ಉಳುಮೆಗಾರರು ಹಕ್ಕು ಮಂಡಿಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೇವಲ 16,136 ಅರ್ಜಿಗಳನ್ನು ಮಾತ್ರ ಪುರಸ್ಕರಿಸಲಾಗಿದೆ. ಸಂಡೂರು ತಾಲೂಕಿನಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ 1612 ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಇತರೆ 2138 ಜನರು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರಣ್ಯ ಸಾಗುವಳಿದಾರರಿಗೆ ಹಕ್ಕುಪತ್ರ ನೀಡದೆ ವಂಚಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್ ಹಾಗೂ ಗಾಳಿ ಬಸವರಾಜ್ ಮಾತನಾಡಿ, ಅರಣ್ಯ ಹಕ್ಕುಕಾಯ್ದೆಯಡಿ ಅರ್ಜಿ ಸಲ್ಲಿಸಿದವರಿಗೆ ಸ್ವೀಕೃತ, ಹಿಂಬರಹ ನೀಡುವುದಿಲ್ಲ. ಗ್ರಾಮಸಭೆ ಹಾಗೂ ಅರಣ್ಯ ಹಕ್ಕುಸಭೆ ನಡೆಸದೆ ಸುಳ್ಳು ದಾಖಲೆ ಸೃಷ್ಟಿಸಿ, ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಅದೇರೀತಿ ಬಗರ್ ಹುಕುಂನ ಸುಮಾರು 11 ಸಾವಿರ ಅರ್ಜಿಗಳಿಗೆ ಹಕ್ಕುಪತ್ರ ನೀಡಲಾಗಿಲ್ಲ. ಇದರಿಂದ ಬಗರ್ ಹುಕುಂ ಸಾಗುವಳಿದಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು. ಗಣಿಗಾರಿಕೆ ಪ್ರದೇಶವಾದ ಸಂಡೂರು ತಾಲೂಕಿನಲ್ಲಿರುವ ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಹೋರಾಟ ಮುಂದುವರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ರಾಜ್ಯದ ಒಟ್ಟು 446 ಗ್ರಾಮಗಳನ್ನು ಗಣಿಗಾರಿಕೆ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಪೈಕಿ ಬಳ್ಳಾರಿ ಜಿಲ್ಲೆಯಲ್ಲಿ 238 ಗ್ರಾಮಗಳಿವೆ. ಇದರಲ್ಲಿ ಸಂಡೂರು ತಾಲೂಕಿನಲ್ಲಿಯೇ 146 ಗ್ರಾಮಗಳನ್ನು ಗಣಿಗಾರಿಕೆ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಯ ಕಡೆ ಗಮನ ನೀಡಲಾಗಿಲ್ಲ. ತಾಲೂಕಿನ ಜನರ ಆರೋಗ್ಯ ಸಮಸ್ಯೆ ಉಲ್ಬಣಿಸಿದ್ದು, ಈ ಬಗೆಗಿನ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರಾಂತ ರೈತ ಸಂಘದ ಮುಖಂಡರಾದ ಎನ್.ಸೋಮಪ್ಪ, ಸಿದ್ದಯ್ಯ, ದುರುಗಮ್ಮ, ಭೀಮಪ್ಪ, ಖಲಂದರ್ ಬಾಷಾ, ಎರಿಸ್ವಾಮಿ, ಕೇರಳಪ್ಪ, ಎ.ಸ್ವಾಮಿ, ಪರಮೇಶ್, ಪಂಪನಗೌಡ, ಖಾಲೂಬಾ, ಮಾರೇಶ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅರಣ್ಯ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ರೈತ ಸಂಘದ ಸಂಡೂರು ತಾಲೂಕು ಘಟಕದ ಸದಸ್ಯರು ಬಳ್ಳಾರಿ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.