ಮಾಧ್ಯಮಗಳಿಂದ ಸಮಾಜದ ಸಮಗ್ರ ಅಭಿವೃದ್ಧಿ: ಕಿರಣ್ ಗೌರಯ್ಯ

| Published : Jul 29 2024, 12:54 AM IST

ಸಾರಾಂಶ

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪತ್ರಕರ್ತರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪತ್ರಿಕಾರಂಗ ನೈಜ ಸಮಸ್ಯೆಗಳ ವಸ್ತು ಸ್ಥಿತಿ ವಿಚಾರಗಳನ್ನು ಪ್ರಕಟಿಸುವ ಮೂಲಕ ಕಾರ್ಯಾಂಗದ ಕಿವಿ ಹಿಂಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಸಮಗ್ರ ಪಾತ್ರ ವಹಿಸುತ್ತಿವೆ ಎಂದು ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಸ್ಯೆಗಳನ್ನು ಮತ್ತು ವಸ್ತು ಸ್ಥಿತಿ ವಿಚಾರಗಳನ್ನು ಅರಿತು ನೈಜ ಸುದ್ಧಿಯಾಗಿ ಪ್ರಕಟಿಸಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಾಣುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅನುವು ಮಾಡಿದಂತಾಗುತ್ತದೆ ಎಂದರು.

ಈ ಸಂದರ್ಭ ಮಾತನಾಡಿದ ಅವರು ಕುಶಾಲನಗರ ತಾಲೂಕು ಪತ್ರಕರ್ತರ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ, ಸುದ್ದಿ ಮಾಡುವ ಭರಾಟೆಯ ನಡುವೆ ಸತ್ಯಾಸತ್ಯತೆ ಬಗ್ಗೆ ಕೂಡ ಅವಲೋಕನ ಮಾಡಬೇಕಾಗಿದೆ ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಪತ್ರಿಕಾ ದಿನಾಚರಣೆಯ ಮಹತ್ವ ಮತ್ತು ಇತಿಹಾಸದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.

ಪ್ರತಿಯೊಬ್ಬರೂ ಪತ್ರಿಕೆ ಓದುವ ಹವ್ಯಾಸ ಇಟ್ಟುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳ ನಿಖರತೆ ಬಗ್ಗೆ ಎಚ್ಚರವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳ ಭರಾಟೆ ಏರಿಕೆಯಾಗುತ್ತಿದೆ. ನಕಾರಾತ್ಮಕ ವಿಚಾರದ ವೇಗ ತಡೆಯಬೇಕಾಗಿದೆ ಎಂದರು.

ಸಂಘದ ಕೊಡಗು ಜಿಲ್ಲಾಧ್ಯಕ್ಷೆ ಬಿ. ಆರ್. ಸವಿತಾ ರೈ ಮಾತನಾಡಿ, ಯಾವುದೇ ಸುದ್ದಿಗಳು ಅಭಾಸ ಉಂಟು ಮಾಡಬಾರದು. ಬ್ರೇಕಿಂಗ್ ಸುದ್ದಿಯ ಧಾವಂತದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವಂತಾಗಿದೆ. ಸುದ್ದಿ ಮಾಡುವ ಸಂದರ್ಭ ವಿಮರ್ಶೆ ಮಾಡುವ ಕೆಲಸ ಪತ್ರಕರ್ತನದಲ್ಲ ಎಂದು ಕಿವಿಮಾತು ಹೇಳಿದರು.

ಸುದ್ದಿಗೋಷ್ಠಿ ನಡೆಯುವ ಸಂದರ್ಭ ಪತ್ರಕರ್ತರು ಸ್ಥಳದಲ್ಲೇ ಹಾಜರಾಗಿ ಸುದ್ದಿ ಪ್ರಕಟಿಸಬೇಕೆ ಹೊರತು ನಕಲು ಸುದ್ದಿ ಮಾಡುವುದು ಒಳಿತಲ್ಲ ಎಂದರು.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ವರದಿ ಆಯ್ಕೆ ಹಿನ್ನೆಲೆಯಲ್ಲಿ ತಾಲೂಕಿನ ಎಂಟು ಮಂದಿ ಪತ್ರಕರ್ತರಾದ ಎಂ ಎನ್ ಚಂದ್ರಮೋಹನ್ , ಎಚ್ ವಿ ವಿನೋದ್, ರಘು ಹೆಬ್ಬಾಲೆ, ವನಿತಾ ಚಂದ್ರಮೋಹನ್, ನಾಗರಾಜ ಶೆಟ್ಟಿ, ಕೆ ಜೆ ಶಿವರಾಜ್, ಇಸ್ಮಾಯಿಲ್ ಕಂಡಕೆರೆ, ಸಂಶುದ್ದೀನ್, ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕುಶಾಲನಗರ ಸಂಘದ ಕಚೇರಿಯಲ್ಲಿ ಕಳೆದ ಸಾಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅತಿ ಹೆಚ್ಚಿನ ಹಾಜರಾತಿ ಪಡೆದ ಪತ್ರಕರ್ತರಾದ ಎಂ ಎನ್ ಚಂದ್ರಮೋಹನ್, ವಿನೋದ್, ನಾಗರಾಜ ಶೆಟ್ಟಿ ಅವರನ್ನು ನಗದು ಬಹುಮಾನ ನೀಡುವ ಮೂಲಕ ಗುರುತಿಸಲಾಯಿತು. ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಮತ್ತು ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಖಜಾಂಚಿ ಕುಡೆಕಲ್ ಗಣೇಶ್ ಪ್ರಾರ್ಥಿಸಿದರು. ಜಿಲ್ಲಾ ನಿರ್ದೇಶಕರು ಸಂಶುದ್ದೀನ್ ಸ್ವಾಗತಿಸಿದರು. ಟಿ ಆರ್ ಪ್ರಭುದೇವ್ ನಿರೂಪಣೆ, ರಘು ಹೆಬ್ಬಾಲೆ ವಂದಿಸಿದರು.

ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಮುನ್ನ ತಾಲೂಕು ಸಂಘದ ವಾರ್ಷಿಕ ಮಹಾಸಭೆ ನಡೆಯಿತು.