ಅಂಕಪಟ್ಟಿ ನೀಡದ ವಿಶ್ವವಿದ್ಯಾಲಯಗಳ ನೀತಿಗೆ ಖಂಡನೆ

| Published : Nov 29 2024, 01:03 AM IST

ಅಂಕಪಟ್ಟಿ ನೀಡದ ವಿಶ್ವವಿದ್ಯಾಲಯಗಳ ನೀತಿಗೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಕಪಟ್ಟಿಗಳನ್ನು ವಿತರಣೆ ಮಾಡದಿರುವ ವಿಳಂಬ ನೀತಿಯನ್ನು ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ ನಡೆಸಿತು.

ರಾಣಿಬೆನ್ನೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ 2020) ಜಾರಿಯಾದ ದಿನದಿಂದ ಇಲ್ಲಿ ವರೆಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ವಿತರಣೆ ಮಾಡದಿರುವ ವಿಳಂಬ ನೀತಿಯನ್ನು ಖಂಡಿಸಿ ಹಾಗೂ ಶೀಘ್ರವಾಗಿ ವಿತರಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲೂಕು ಸಮಿತಿ ನೇತೃತ್ವದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ಕಾಲೇಜಿನ ಎದುರು ಪ್ರತಿಭಟಿಸಿ ಪ್ರಾ. ರವಿಕುಮಾರ್ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ 2020) ಜಾರಿಯಾದ ನಂತರ ಸುಮಾರು 22ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಸುಮಾರು 51 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆ ಮಾಡಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯದಲ್ಲಿ ಎನ್‌ಇಪಿ ರದ್ದುಗೊಳಿಸಿ ಎಸ್‌ಇಪಿ ಜಾರಿಗೊಳಿಸಿದೆ. ಆದರೆ ಎಸ್‌ಇಪಿ ವಿದ್ಯಾರ್ಥಿಗಳಿಗೂ ಅಂಕಪಟ್ಟಿ ಸಿಗುತ್ತಿಲ್ಲ. ಉನ್ನತ ವಿದ್ಯಾಭ್ಯಾಸಕ್ಕೆ ಅಂಕಪಟ್ಟಿ ಬೇಕಾಗಿರುವ ಕಾರಣ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳು ಅಂಕಪಟ್ಟಿ ಕೇಳಿಕೊಂಡು ಹೋದರೆ ಡಿಜಿ ಲಾಕರ್‌ನಲ್ಲಿ ಅಂಕಪಟ್ಟಿ ತೆಗೆದುಕೊಳ್ಳಿ ಎಂದು ತಿಳಿಸುತ್ತಿದ್ದಾರೆ. ಆದರೆ, ಅದರಲ್ಲಿಯೂ ಸಿಗುತ್ತಿಲ್ಲ. ವಿದ್ಯಾರ್ಥಿಗಳು ವಿಚಾರಿಸಿದರೆ ತಾಂತ್ರಿಕ ಸಮಸ್ಯೆ ನೆಪ ಹೇಳಲಾಗುತ್ತಿದೆ. ಯುಸಿಸಿಎಂಎಸ್ (Unified University & College Management System) ಜಾರಿಗೆ ಬಂದ ದಿನದಿಂದ ಈ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಇದಲ್ಲದೆ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ, ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಸಲೂ ತೊಂದರೆ ಉಂಟಾಗುತ್ತಿದೆ. ಎನ್‌ಇಪಿಯಲ್ಲಿ ಆನ್‌ಲೈನ್ ಅಂಕಪಟ್ಟಿ ಜೊತೆಗೆ ಮುದ್ರಿತ ಅಂಕಪಟ್ಟಿ ನೀಡಬೇಕೆಂಬ ನಿಯಮವಿದೆ. ಅದಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಡಿ. 22, 2022ರಂದು ಎಲ್ಲ ವಿಶ್ವವಿದ್ಯಾನಿಲಯಗಳು ಮುದ್ರಿತ ಅಂಕಪಟ್ಟಿ ವಿತರಿಸಬೇಕೆಂದು ಆದೇಶ ಕೂಡ ಮಾಡಿದ್ದಾರೆ. ಹೀಗಿದ್ದರೂ ವಿಶ್ವವಿದ್ಯಾನಿಲಯಗಳು ರಾಜ್ಯಪಾಲರ ಆದೇಶ ಪಾಲಿಸುತ್ತಿಲ್ಲ. ಆದ್ದರಿಂದ ತಕ್ಷಣ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಂಕಪಟ್ಟಿ ವಿತರಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಗೌತಮ ಸಾವಕ್ಕನವರ ಮಾತನಾಡಿದರು. ಎಸ್‌ಎಫ್‌ಐ ಉಪಾಧ್ಯಕ್ಷ ಮಹೇಶ್ ಮರೋಳ, ವಿದ್ಯಾ, ಬಸವರಾಜ ಕೊಣಸಾಲಿ, ನೇಹಾಲ್‌ ಖಾನ್ ಗಂಗಾವತಿ, ಮುಖಂಡರಾದ ಕೃಷ್ಣ ನಾಯಕ, ನವೀನ್ ಕಟ್ಟಣ್ಣವರ್, ಅನಿಲ್ ತರದಹಳ್ಳಿ, ಸುರೇಶ್ ಲಮಾಣಿ, ಚಂದ್ರು ಕೆ., ವಿಕಾಸ ಕುಮಾರ್ ಎಚ್.ಡಿ., ಶಶಿ ಎಣ್ಣೆಯವರ, ಮನೋಜ ಎಸ್., ವೀರೇಶ ಚಿಕ್ಕೇರೂರ, ವಿಕಾಸ ಕಾಯಕದ, ಭವ್ಯಾ ಡಿ.ಆರ್., ಲಕ್ಷ್ಮೀ ನಡುವಿನಮನಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.