ಸಾರಾಂಶ
ಮೂಡಲಪಾಯ ಯಕ್ಷಗಾನ ನಶಿಸುವ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ದೊಡ್ಡ ಬ್ಯಾಡರಹಳ್ಳಿ ಶಾಲೆಯೊಂದರ ಮಕ್ಕಳಿಗೆ ಕರ್ನಾಟಕ ಸಂಘ ತರಬೇತಿ ನೀಡಿ ಮೂಡಲಪಾಯ ಯಕ್ಷಗಾನ ಉಳಿಸುವ ಕೆಲಸ ಮಾಡುತ್ತಿದೆ. ಈ ಕಲೆಯನ್ನು ಉಳಿಸಿ ಬೆಳೆಸಲು ಜಾನಪದ ಅಕಾಡೆಮೆ ನಿರ್ಧರಿಸಿದೆ
ಕನ್ನಡಪ್ರಭ ವಾರ್ತೆ ಕೋಲಾರನಶಿಸಿ ಹೋಗುತ್ತಿರುವ ಮೂಡಲಪಾಯ ಯಕ್ಷಗಾನ ಕಲೆಯನ್ನು ಉಳಿಸುವ ಪ್ರಯತ್ನವಾಗಿ ಮಂಡ್ಯ ಜಿಲ್ಲೆಯ ದೊಡ್ಡ ಬ್ಯಾಡರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳ ಅದ್ಬುತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಮೂಲಕ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ದೇಸೀ ಆಹಾರ ಮೇಳ ಮತ್ತು ಮೂಡಲಪಾಯ ಯಕ್ಷಗಾನ ಪ್ರದರ್ಶನವನ್ನು ಮಂಗಸಂದ್ರ ಬಳಿಯಿರುವ ವಿವಿ ಕೇಂದ್ರದಲ್ಲಿ ಕೃಷಿ ವಿಜ್ಞಾನಿ ಹಾಗೂ ಬರಹಗಾರ ಡಾ.ಕೆ.ಎನ್.ಗಣೇಶಯ್ಯ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ಮೂಡಲಪಾಯ ಯಕ್ಷಗಾನ ನಶಿಸುವ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಸಣ್ಣ ಶಾಲೆಯೊಂದರ ಮಕ್ಕಳಿಗೆ ಕರ್ನಾಟಕ ಸಂಘ ತರಬೇತಿ ನೀಡಿ ಮೂಡಲಪಾಯ ಯಕ್ಷಗಾನ ಉಳಿಸುವ ಕೆಲಸ ಮಾಡುತ್ತಿದೆ ಎಂದು ಅಭಿನಂದಿಸಿದರು.ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್ ಮಾತನಾಡಿ, ಈ ಮೂಡಲಪಾಯ ಯಕ್ಷಗಾನ ಕಲೆಯನ್ನು ಉಳಿಸುವ ಕಾರ್ಯದಲ್ಲಿ ತಾವೂ ಕೈಜೋಡಿಸುವುದಾಗಿ ಘೋಷಿಸಿದರು.ದೇಶಿ ಆಹಾರಮೇಳ: ಇದೇ ಸಂದರ್ಭದಲ್ಲಿ ನಡೆದ ದೇಶಿ ಆಹಾರ ಮೇಳದಲ್ಲಿ ವಿವಿಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಅಂಗಡಿ ಮಳಿಗೆಗಳನ್ನು ಸ್ಥಾಪಿಸಿ ವ್ಯಾಪಾರ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಡಿ.ಕುಮುದ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಡಾ.ತಿಪ್ಪೇಸ್ವಾಮಿ ಕೆ, ಉತ್ತರ ವಿವಿ ವಿತ್ತಾಧಿಕಾರಿ ವಸಂತಕುಮಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮದ್ದೇರಿ ಮುನಿರೆಡ್ಡಿ ಮತ್ತಿತರರು ಉಪಸ್ಥಿತರಿರುವರು.