ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಒತ್ತಾಯ

| Published : Nov 29 2024, 01:03 AM IST

ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ, ಚಿನ್ನದ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹುನ್ನಾರ ನಡೆಸಿವೆ. ಅರಣ್ಯ ಇಲಾಖೆ ಕಂಪನಿಗಳ ಅರ್ಜಿ ತಿರಸ್ಕರಿಸಿದರೂ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಪದೇ ಪದೆ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ

ಗದಗ: ಕಪ್ಪತಗುಡ್ಡ ವನ್ಯ ಜೀವಿಧಾಮದ ಪರಿಧಿಯ 10 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಕೈಗೊಳ್ಳದಂತೆ ಒತ್ತಾಯಿಸಿ ಜಯ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಮಾತನಾಡಿ, ಜಿಲ್ಲೆಯ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರವರೆಗೆ ಚಾಚಿಕೊಂಡಿರುವ ಕಪ್ಪತ್ತಗುಡ್ಡವು ಜಿಲ್ಲೆಯ ಉತ್ತರದಿಂದ ದಕ್ಷಿಣಕ್ಕೆ ಸುಮಾರು 65 ಕಿಮೀಗಳಷ್ಟು ಉದ್ದಕ್ಕೆ ಕವಲು-ಕವಲಾಗಿ ಹರಡಿಕೊಂಡಿದೆ. ಇದು ಸಣ್ಣಪುಟ್ಟ ಗುಡ್ಡಗಳ ಸಾಲುಗಳಿಂದ ಕೂಡಿದ್ದು, ಈ ಗುಡ್ಡಗಳು ಸುಮಾರು 2 ಕಿಮೀಯಿಂದ 10ಕಿಮೀಗಳಷ್ಟು ಅಗಲವಾಗಿದೆ. ಒಟ್ಟು 32,346.524 ಹೆಕ್ಟೇರ್‌ ಪ್ರದೇಶ 80 ಸಾವಿರ ಎಕರೆ ಅರಣ್ಯ ಪ್ರದೇಶದ ವಿಸ್ತಾರದ ಗುಡ್ಡವು ಸಮುದ್ರ ಮಟ್ಟದಿಂದ ಸುಮಾರು 2,700 ಅಡಿ ಎತ್ತರದಲ್ಲಿದೆ. ಅಲ್ಲದೇ ಈ ಪ್ರದೇಶವು 244.5 ಚ.ಕಿ.ಮೀ. ವ್ಯಾಪಿಸಿದೆ. ಪ್ರಮುಖವಾಗಿ ಸೂಜಿ ಮಡ್ಡಿ, ಕೆಂಪ ಗುಡ್ಡ, ಗಾಳಿ ಗುಂಡಿ, ಎತ್ತಿನ ಗುಡ್ಡ, ಆನೆ ಸೊಂಡಿಲು, ಉಪ್ಪಿನ ಪಡಿ, ಮಂಜಿನ ಗುಡ್ಡ, ಮಜ್ಜಿಗೆ ಬಸವಣ್ಣ ಗುಡ್ಡ ಸೇರಿದಂತೆ ಹಲವು ಹೆಸರಿನ ಗುಡ್ಡ ಹೊಂದಿದೆ. ವಿಶಾಲವಾಗಿ ಹರಡಿಕೊಂಡಿರುವ ಈ ಗುಡ್ಡಗಳಲ್ಲಿ ಹತ್ತಾರು ವನ್ಯ ಪ್ರಾಣಿ-ಪಕ್ಷಿಗಳು, ಔಷಧಿ ಸಸ್ಯಗಳು ಮತ್ತು ಬಗೆ ಬಗೆಯ ಪ್ರಭೇದಗಳ ಮರಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಪ್ಪತ್ತಗುಡ್ಡವನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲಾಗುತ್ತದೆ.

ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ, ಚಿನ್ನದ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹುನ್ನಾರ ನಡೆಸಿವೆ. ಅರಣ್ಯ ಇಲಾಖೆ ಕಂಪನಿಗಳ ಅರ್ಜಿ ತಿರಸ್ಕರಿಸಿದರೂ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಪದೇ ಪದೆ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಸದ್ಯ ವನ್ಯಜೀವಿಧಾಮದ ಕಾನೂನು ಪ್ರಕಾರ 10 ಕಿಮೀ ವ್ಯಾಪ್ತಿ ಒಳಗಾಗಿ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡುವಂತಿಲ್ಲ. ಆದರೆ ಇದನ್ನು ಒಂದು ಕಿಮೀ ವ್ಯಾಪ್ತಿಗೆ ಇಳಿಸುವಂತೆ ಭೂಗಳ್ಳರ, ಬಂಡವಾಳಶಾಹಿಗಳು, ಒಳಸಂಚು ರೂಪಿಸುತ್ತಿದ್ದಾರೆ.

ಆದ ಕಾರಣ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಪರವಾನಿಗೆ ನೀಡಬಾರದು ಇದಕ್ಕೆ ಬಲವಾದ ಆಕ್ಷೇಪಣೆ ಇದೆ ಮತ್ತು ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 10 ಕಿಮೀ ನಂತರ ಗಣಿಗಾರಿಕೆ ಮಾಡುವುದು ಕಾನೂನಿದೆ ಅದನ್ನ ಪರಿಪಾಲನೆ ಮಾಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದರು.

ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ, ನಾಗರಾಜ ಕ್ಷತ್ರಿಯ, ರಮೇಶ ರಾಠೋಡ, ನವಿನ ಭಂಡಾರಿ, ದಾದು ಮುಂಡರಗಿ, ಗವಿಸಿದ್ದಯ್ಯ ಹಳ್ಳಿಕೆರಿ, ಸಾಧಿಕ ಗುಳಗುಂದಿ, ನಿಜಾಮ ಹುಬ್ಬಳ್ಳಿ, ವಿಕಾಸ ಕ್ಷಿರಸಾಗರ, ಅಶರಫ್‌, ಇಬ್ರಾಹಿಂ, ರಶೀದ ಮಕಾಂದಾರ ಮುಂತಾದವರು ಉಪಸ್ಥಿತರಿದ್ದರು.