ಕೊಪ್ಪಳ: ನಗರದ ಸರ್ಕಾರಿ ಪದವಿ ಪೂರ್ವ (ಜೂನಿಯರ್) ಕಾಲೇಜು ಆವರಣದಲ್ಲಿದ್ದ ಕಲಾ ರಂಗಮಂದಿರವನ್ನು ನೆಲಸಮಗೊಳಿಸಿ, ಕಾಲೇಜು ಆವರಣವನ್ನು ಇತರ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಕ್ರಮವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಜಿಲ್ಲಾ ಘಟಕ ಸೋಮವಾರ ತಹಸೀಲ್ದಾರ್ ರಾಜು ಫಿರಂಗಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಯು. ಮಾತನಾಡಿ, ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ (ಜೂನಿಯರ್) ಕಾಲೇಜಿನ ಸುಮಾರು 10 ಎಕರೆ ವಿಸ್ತೀರ್ಣದ ಮೈದಾನಕ್ಕೆ 75 ವರ್ಷಗಳ ಇತಿಹಾಸವಿದೆ. 2004ರ ವರೆಗೆ ತಾಲೂಕಿನ ವಿವಿಧ ಶಾಲೆ-ಕಾಲೇಜುಗಳ ಕ್ರೀಡಾಕೂಟಗಳು, ಸಾರ್ವಜನಿಕ ಸಭೆಗಳು, ಕನ್ನಡಪರ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು ಹಾಗೂ ಸರ್ಕಾರಿ ಯೋಜನೆಗಳ ಬಹಿರಂಗ ಕಾರ್ಯಕ್ರಮಗಳು ಇದೇ ಮೈದಾನದಲ್ಲಿ ನಡೆಯುತ್ತಿದ್ದವು. ಕಳೆದ 25 ವರ್ಷಗಳಲ್ಲಿ ಹಂತಹಂತವಾಗಿ ಮೈದಾನ ಅತಿಕ್ರಮಣಕ್ಕೆ ಒಳಗಾಗಿದ್ದು, ಅದನ್ನು ಉಳಿಸಿಕೊಳ್ಳಲು ಎಸ್ಎಫ್ಐ ನಿರಂತರ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.ಕಾಲೇಜು ಆವರಣದ ಮುಂಭಾಗದಲ್ಲಿ ನಗರಸಭೆ, ಪಿಕಾರ್ಡ್, ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ), ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ಸೇರಿದಂತೆ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಜತೆಗೆ ಬಾಲಕಿಯರ, ಬಾಲಕರ ಹಾಗೂ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಸಂಬಂಧಿಸಿದ ಕಟ್ಟಡಗಳ ಹೆಸರಿನಲ್ಲಿ ಅನಗತ್ಯ ನಿರ್ಮಾಣಗಳು ನಡೆದಿರುವುದರಿಂದ ಕಾಲೇಜಿನ ವಿಶಾಲ ಮೈದಾನ ಬಹುತೇಕ ಕಣ್ಮರೆಯಾಗಿದೆ ಎಂದು ಹೇಳಿದರು.
ಮೈದಾನದಲ್ಲಿದ್ದ ಕಲಾ ರಂಗಮಂದಿರ ಅನೇಕ ರಂಗಭೂಮಿ ಕಲಾವಿದರನ್ನು ರೂಪಿಸಿದ ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಂತಹ ರಂಗಮಂದಿರವನ್ನು ನಗರಸಭೆ ಫುಡ್ ಕೋರ್ಟ್ ನಿರ್ಮಾಣದ ಹೆಸರಿನಲ್ಲಿ ಬುಲ್ಡೋಜರ್ ಮೂಲಕ ನೆಲಸಮಗೊಳಿಸಿರುವುದು ಖಂಡನೀಯ. ಈ ಕ್ರಮದ ಹಿಂದೆ ರಾಜಕೀಯ ಪ್ರಭಾವವಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.ಸರ್ಕಾರದ ಇತರ ಯೋಜನೆಗಳಿಗೆ ಹಳೆಯ ಐಬಿ ಸೇರಿದಂತೆ ಪರ್ಯಾಯ ಜಾಗಗಳಿದ್ದರೂ ಸರ್ಕಾರಿ ಕಾಲೇಜು ಆವರಣವನ್ನೇ ಬಳಸುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗೆ ಧಕ್ಕೆ ಉಂಟುಮಾಡಲಿದೆ. ರಂಗಮಂದಿರ ಧ್ವಂಸದಿಂದ ಕಲಾವಿದರು ಹಾಗೂ ಕಲಾಭಿಮಾನಿಗಳಲ್ಲಿ ತೀವ್ರ ಆತಂಕ ಉಂಟಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಡಳಿತ ಕೂಡಲೇ ಮಧ್ಯಸ್ಥಿಕೆ ವಹಿಸಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಅದೇ ಸ್ಥಳದಲ್ಲಿ ಕಲಾ ರಂಗಮಂದಿರ ಮರು ನಿರ್ಮಿಸಬೇಕು. ಇಲ್ಲವಾದಲ್ಲಿ ಎಸ್ಎಫ್ಐ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಜಿಲ್ಲಾ ಉಪಾಧ್ಯಕ್ಷ ನಾಗರಾಜ ಯು., ಬಸವರಾಜ ಮರಕುಂಬಿ, ಹುಸೇನಪ್ಪ ಕೆ., ರಮೇಶ್ ಡಿ. ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.