ಜನರ ಸಮಸ್ಯೆ ಪರಿಹರಿಸಲು ಗ್ರಾಮಸಭೆ ನಡೆಸಿ

| Published : Jul 12 2024, 01:41 AM IST

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಪುನರ್ವಸತಿ ಕೇಂದ್ರಗಳಲ್ಲಿ ಜನವಸತಿ ಇರುವ ಗ್ರಾಮಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಮ ಸಭೆಗಳನ್ನು ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಪುನರ್ವಸತಿ ಕೇಂದ್ರಗಳಲ್ಲಿ ಜನವಸತಿ ಇರುವ ಗ್ರಾಮಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಮ ಸಭೆಗಳನ್ನು ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸೂಚಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಪುನರ್ವಸತಿ ಕುರಿತು ಸಭೆ ನಡೆಸಿದ ಅವರು, ಆರ್‌ಸಿ ಕೇಂದ್ರಗಳಲ್ಲಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ಒದಗಿಸಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಮಾಡಿಕೊಂಡ ಮನವಿಗೆ ಸಚಿವರು, ಸಭೆ ಕರೆಯಲು ಸೂಚಿಸಿದರು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, 1984ರಿಂದ ಮುಳುಗಡೆಯಾದ ವಿಧಾನಸಭಾ ಕ್ಷೇತ್ರದ ಗ್ರಾಮಗಳ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಜನರು ಮೂಲ ಸೌಲಭ್ಯಗಳಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ಒದಗಿಸಬೇಕಿದೆ ಎಂದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಜೆ.ಟಿ. ಪಾಟೀಲ, ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿಯೂ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ. ಕೂಡಲೇ ಅವಶ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

ಕಲಾದಗಿ ಮುಳುಗಡೆಯಾಗಿ ಇಷ್ಟು ವರ್ಷಗಳಾದರೂ ಪೂರ್ಣ ಪ್ರಮಾಣದಲ್ಲಿ ಹಕ್ಕುಪತ್ರಗಳ ವಿತರಣೆಯಾಗಿಲ್ಲ. ಕಲಾದಗಿ ಅಭಿವೃದ್ಧಿಗೆ ಬಂದ ಅನುದಾನ ವಾಪಸ್ ಹೋಗುತ್ತಿದೆ. ಸರಿಯಾದ ನಿರ್ಣಯ ತೆಗೆದುಕೊಳ್ಳದಿದ್ದರೆ ಏನು ಉಪಯೋಗ ಎಂದು ಪ್ರಶ್ನಿಸಿದರು.

ಪದವಿ ಕಾಲೇಜು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ 10 ಎಕರೆ ಜಮೀನು ಕೇಳಿದ್ದೇವೆ. ಇಲ್ಲಿಯವರೆಗೂ ಕೊಟ್ಟಿಲ್ಲ. ಕೂಡಲೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸಚಿವ ಆರ್.ಬಿ.ತಿಮ್ಮಾಪುರ, ಸ್ಮಶಾನಕ್ಕೆ ಜಾತಿ ಆಧಾರದ ಮೇಲೆ ಜಾಗ ಮೀಸಲಾಗಿಟ್ಟಿದ್ದೀರಾ? ಎಂಬ ಪ್ರಶ್ನೆಗೆ ಅಧಿಕಾರಿಗಳು ಇಲ್ಲ ಎಂದರು.

ಸಾವಿರ ಜನ ಸಂಖ್ಯೆ ಇದ್ದರೆ ಎಷ್ಟು ಸ್ಮಶಾನಕ್ಕೆ ಎಷ್ಟು ಜಾಗ ಬೇಕಾಗುತ್ತದೆ ಎಂಬ ಪ್ರಶ್ನೆಗೂ ಉತ್ತರ ಬಾರದಿದ್ದಾಗ, ಜನ ಸಾಮಾನ್ಯರಿಗೆ ಗೊತ್ತಾಗುವುದು, ನಿಮಗೆ ಗೊತ್ತಾಗುವುದಿಲ್ಲ ಎಂದರೆ ಹೇಗೆ? ವೈಜ್ಞಾನಿಕವಾಗಿ ಪ್ರಸ್ತಾವ ಸಲ್ಲಿಸಿ ಎಂದು ಸೂಚಿಸಿದರು.

ಜನ ವಸತಿ ಇಲ್ಲದ ಗ್ರಾಮಗಳಲ್ಲಿ ಕಾಮಗಾರಿ ತೆಗೆದುಕೊಳ್ಳುವುದಕ್ಕಿಂತ ಜನ ವಸತಿ ಇದ್ದೂ ಸೌಲಭ್ಯಗಳಿಲ್ಲದ ಗ್ರಾಮಗಳಲ್ಲಿ ಕಾಮಗಾರಿ ತೆಗೆದುಕೊಳ್ಳಿರಿ ಎಂದು ಹೇಳಿದರು.

ಶಾಸಕರಾದ ಎಚ್.ವೈ.ಮೇಟಿ, ಜಗದೀಶ ಗುಡಗುಂಟಿ, ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮ್ಮದ್ ಮೊಹಸಿನ್ ಇದ್ದರು.

----ಬಾಕ್ಸ್‌....

ಅನರ್ಹರಿಗೆ ನಿವೇಶನ ಹಂಚಿಕೆ: ತನಿಖೆಗೆ ಆಗ್ರಹ

ಜಿಲ್ಲೆಯ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ ಮೀಸಲಿಟ್ಟಿದ್ದ ನಿವೇಶನಗಳು ಹಾಗೂ ಹೆಚ್ಚುವರಿ ನಿವೇಶನಗಳನ್ನು ಅಧಿಕಾರಿಗಳು ಅನರ್ಹರಿಗೆ ಹಂಚಿಕೆ ಮಾಡಿದ್ದಾರೆ. ಮಾರಾಟ ಮಾಡಿಕೊಂಡಿದ್ದು, ತನಿಖೆ ಮಾಡಬೇಕು ಎಂದು ಶಾಸಕರಾದ ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ ಒತ್ತಾಯಿಸಿದರು.ಕೂಡಲಸಂಗಮ ಪುನರ್ವಸತಿ ಕೇಂದ್ರದಲ್ಲಿ ಈ ರೀತಿ ಮಾಡಲಾಗಿದೆ. ಇಂತಹದೇ ಹಲವು ಕಡೆ ಆಗಿದೆ. ತನಿಖೆ ಮಾಡಿ ಎಂದು ಆಗ್ರಹಿಸಿದರು.

ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಒಂದು ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಬೇರೆ ಗ್ರಾಮದವರಿಗೆ ನಿವೇಶನ ನೀಡಲಾಗಿದೆ. ವಾಣಿಜ್ಯ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಸಂತ್ರಸ್ತರದಲ್ಲದವರಿಗೂ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.