ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ಅ. 26ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, ಅ. 27ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯು ಕಾರವಾರದ 5, ಹೊನ್ನಾವರ 2, ಕುಮಟಾ 2, ಶಿರಸಿ 4 ಹಾಗೂ ಹಳಿಯಾಳದ 2 ಸೇರಿದಂತೆ ಜಿಲ್ಲೆಯ 15 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ನಡೆಯುವ ಪರೀಕ್ಷೆಯಲ್ಲಿ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಶಿಸ್ತು ಮತ್ತು ಅವ್ಯವಹಾರ ನಡೆಯಂತೆ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ಅ. 26ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, ಅ. 27ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯು ಕಾರವಾರದ 5, ಹೊನ್ನಾವರ 2, ಕುಮಟಾ 2, ಶಿರಸಿ 4 ಹಾಗೂ ಹಳಿಯಾಳದ 2 ಸೇರಿದಂತೆ ಜಿಲ್ಲೆಯ 15 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದರು.

ಒಟ್ಟು 4,985 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸುಗಮ ಮತ್ತು ಪಾರದರ್ಶಕ ರೀತಿಯಲ್ಲಿ ಪರೀಕ್ಷೆ ನಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು, ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಲೋಪಗಳಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದರು.

ಪ್ರಶ್ನೆ ಪತ್ರಿಕೆಗಳನ್ನು ಕೇಂದ್ರಗಳಿಗೆ ತಲುಪಿಸಲು ಮಾರ್ಗಾಧಿಕಾರಿಗಳನ್ನು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರನ್ನು ಮತ್ತು ವಿಶೇಷ ಜಾಗೃತ ದಳದ ಸದಸ್ಯರನ್ನು ನೇಮಕ ಮಾಡುವಂತೆ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಗರಿಷ್ಠ ಭದ್ರತೆಯಲ್ಲಿ ನಿಗದಿತ ಸಮಯಕ್ಕೆ ತಲುಪಿಸಲು ಮತ್ತು ಉತ್ತರ ಪತ್ರಿಕೆಗಳನ್ನು ಜಿಲ್ಲಾ ಖಜಾನೆಗೆ ತಲುಪಿಸುವಂತೆ ಸೂಚಿಸಿದರು.

ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಸಾಗಾಣಿಕೆ ವಾಹನಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಅಭ್ಯರ್ಥಿಗಳ ಆರೋಗ್ಯದಲ್ಲಿ ತೊಂದರೆಯಾದಲ್ಲಿ ತುರ್ತು ಚಿಕಿತ್ಸೆ ನೀಡಲು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ವೈದ್ಯಕೀಯ ಸಿಬ್ಬಂದಿಯನ್ನು ಹಾಗೂ ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಬೇಕು. ಪರೀಕ್ಷಾ ದಿನದಂದು ವಿದ್ಯುತ್ ವ್ಯತ್ಯಯವಾಗದಂತೆ ಮತ್ತು ಪರೀಕ್ಷಾ ದಿನದಂದು ಬಸ್‌ಗಳ ಸಂಚಾರವನ್ನು ಸಮರ್ಪಕವಾಗಿರುವಂತೆ ಎಚ್ಚರ ವಹಿಸಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಪರೀಕ್ಷೆಗಾಗಿ ಅಭ್ಯರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರದಲ್ಲಿ ನೀಡಿರುವ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಿರುವ ಕುರಿತಂತೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಬೇಕು ಎಂದರು.ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ, ಯಾವುದೇ ಲೋಪಗಳಾಗದಂತೆ ನೋಡಿಕೊಂಡು ಪರೀಕ್ಷಾ ಪಾವಿತ್ರ್ಯವನ್ನು ಕಾಪಾಡಬೇಕು. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.ಉಪವಿಭಾಗಾಧಿಕಾರಿ ಕನಿಷ್ಕ, ಹೆಚ್ಚುವರಿ ಪೊಲೀಸ್ ವರಿಷ್ಠ ಜಗದೀಶ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಪ್ಪ ಮೊದಲಾದವರು ಇದ್ದರು.