ಸಾರಾಂಶ
ಹುಬ್ಬಳ್ಳಿ: ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರು ಮತ್ತು ಅವರ ಧರ್ಮ ಪ್ರಸ್ತಾಪಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಗರಂ ಆದ ಪ್ರಸಂಗ ನಡೆಯಿತು. ಇದರಿಂದ ಸಮಾವೇಶದಲ್ಲಿ ಕೆಲಕಾಲ ಗೊಂದಲ ಕೂಡ ಉಂಟಾಯಿತು.
ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ವೀರಶೈವ-ಲಿಂಗಾಯತ ಏಕತಾ ಸಮಾವೇಶದದಲ್ಲಿ ಮಹಾರಾಷ್ಟ್ರದ ಶಿವ ಸಂಘಟನೆಯ ಮನೋಹರ ದೋಂಡೆ ಮಾತನಾಡುವಾಗ ಜಾತಿ ಕಾಲಂನಲ್ಲಿ ಹಿಂದೂ ಎಂದು ಬರೆಸುವುದು ಬೇಡ. ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಪ್ರತಿಪಾದಿಸುತ್ತ, ಹಿಂದುತ್ವ ಪ್ರತಿಪಾದಿಸುವ ಕೇಂದ್ರ ಗೃಹಸಚಿವ ಅಮಿತ್ ಶಾ ಧರ್ಮವೂ ಬೇರೆಯಾಗಿದೆ. ಶಾ ಕೇಂದ್ರದಲ್ಲಿ ಎರಡನೆಯ ಸ್ಥಾನದಲ್ಲಿದ್ದಾರೆ ಎಂದು ಪ್ರಸ್ತಾಪಿಸಿದರು.ಸಮಾವೇಶದ ಆರಂಭದಲ್ಲೇ ಮಹಾಸಭೆಯು, ಇಲ್ಲಿ ಯಾವುದೇ ರಾಜಕಾರಣಿಯ ಹೆಸರು, ಪಕ್ಷವನ್ನು ಪ್ರಸ್ತಾಪಿಸದೇ ವೀರಶೈವ-ಲಿಂಗಾಯತದ ಬಗ್ಗೆ ಮಾತ್ರ ಮಾತನಾಡಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಶೆಟ್ಟರ್, ಬೊಮ್ಮಾಯಿ, ಖಂಡ್ರೆ ಸೇರಿದಂತೆ ಹಲವರು ಮಾತನಾಡಿದ್ದರು.
ಮನೋಹರ ದೋಂಡೆ ಅವರು ಶಾ ಹೆಸರು ಪ್ರಸ್ತಾಪಿಸುತ್ತಿದ್ದಂತೆ ತಕ್ಷಣವೇ ಸಂಘಟಕರು ಮೈಕ್ ಬಂದ್ ಮಾಡಿ ಭಾಷಣ ಅಷ್ಟಕ್ಕೆ ನಿಲ್ಲಿಸುವಂತೆ ಮಾಡಿದರು. ಆದರೆ ಮಾಜಿ ಸಿಎಂ ಬೊಮ್ಮಾಯಿ ಎದ್ದು ಡಯಾಸ್ ಬಳಿ ಬಂದು ಒಂದು ಕ್ಷಣ ತಮಗೆ ಮಾತನಾಡಲು ಅವಕಾಶ ನೀಡಬೇಕು. ನಮಗೊಂದು ನ್ಯಾಯ, ಅವರಿಗೊಂದ ನ್ಯಾಯನಾ? ನೀವು ಹೇಳಿದಂತೆ ನಾವೆಲ್ಲರೂ ಮಾತನಾಡಿದ್ದೇವೆ. ಅವರೀಗ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ನಾವು ಮಾತನಾಡಲು ನಿಂತರೆ ಗಂಟೆಗಟ್ಟಲೇ ಎಲ್ಲ ವಿಷಯವನ್ನೂ ಮಾತನಾಡಬೇಕಾಗುತ್ತದೆ ಎಂದು ತಾಕೀತು ಮಾಡಿದರು. ಇದಕ್ಕೆ ಶೆಟ್ಟರ್ ಧ್ವನಿಗೂಡಿಸಿ, ಅವರಿಗೆ ಹೇಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿರಿ ಎಂದು ಸಂಘಟಕರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಶೆಟ್ಟರ್, ಬೊಮ್ಮಾಯಿ ಇಬ್ಬರು ವೇದಿಕೆಯಿಂದ ಹೊರಡಲು ಎದ್ದು ನಿಂತರು.ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಈಶ್ವರ ಖಂಡ್ರೆ ಮತ್ತು ಶಂಕರ ಬಿದರಿ ಅವರು ಇಬ್ಬರನ್ನು ತಡೆದು ನಿಲ್ಲಿಸಿ ಮನವೊಲಿಸಿದರು. ಈ ವೇಳೆ ಮಹಾಸಭಾದಿಂದ ಫಕೀರ ದಿಂಗಾಲೇಶ್ವರ ಶ್ರೀಗಳು ಸ್ಪಷ್ಟನೆ ನೀಡಿದರು. ಈಶ್ವರ ಖಂಡ್ರೆ ಮಾತನಾಡಿ, ರಾಜಕೀಯ ವ್ಯಕ್ತಿ ಹಾಗೂ ಪಕ್ಷದ ಹೆಸರು ಬಳಸದಂತೆ ಹೇಳಿದ್ದೆವು. ಆದರೆ ಅಚಾತುರ್ಯ ನಡೆದಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದರು.
ಈ ಘಟನೆಯಿಂದ ಬೇಸರಗೊಂಡ ಮಹಾರಾಷ್ಟ್ರದ ದೋಂಡೆ ಕಾರ್ಯಕ್ರಮ ಮುಗಿಯುವ ಮುನ್ನವೇ ಅಲ್ಲಿಂದ ಹೊರನಡೆದರು.