ಸಾರಾಂಶ
ವೀರಶೈವ-ಲಿಂಗಾಯತ ಎರಡು ಒಂದೇ. ಇವು ಹಿಂದೂ ಧರ್ಮದ ಭಾಗ. ಲಿಂಗಾಯತ, ವೀರಶೈವ ಅಧಿಕೃತ ಧರ್ಮವಲ್ಲ
ಹುಬ್ಬಳ್ಳಿ: ಜಾತಿ ಗಣತಿ (ಸಾಮಾಜಿಕ ಆರ್ಥಿಕ ಸಮೀಕ್ಷೆ) ಮೂರ್ಖ ಹಾಗೂ ಅಯೋಗ್ಯತನದ ಸಮೀಕ್ಷೆ ಯಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಇದನ್ನು ಕೈಬಿಡಬೇಕು ಎಂದು ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣತಿಯ ಮಾದರಿ ರೂಪಿಸಿದವರನ್ನು ಕಪಾಳಕ್ಕೆ ಹೊಡೆಯಬೇಕು. ವ್ಯವಸ್ಥಿತವಾಗಿ ಹಿಂದೂ ಸಮಾಜ ಒಡೆದು ಸಾಬರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.ವೀರಶೈವ-ಲಿಂಗಾಯತ ಎರಡು ಒಂದೇ. ಇವು ಹಿಂದೂ ಧರ್ಮದ ಭಾಗ. ಲಿಂಗಾಯತ, ವೀರಶೈವ ಅಧಿಕೃತ ಧರ್ಮವಲ್ಲ. ಅದಕ್ಕೆ ಕೇಂದ್ರ ಸರ್ಕಾರದಿಂದ ಮಾನ್ಯತೆಯೂ ಸಿಕ್ಕಿಲ್ಲ. ಹೀಗಾಗಿ ಲಿಂಗಾಯತ ಸಮುದಾಯದವರು ಜಾತಿ ಸಮೀಕ್ಷೆ ಸಂದರ್ಭದಲ್ಲಿ ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ಬರೆಸಬೇಕು ಎಂದು ವಿನಂತಿಸಿದರು.
ಹಿಂದೂ ಧರ್ಮ ಬೇಡ ಎನ್ನುವ ಸ್ವಾಮೀಜಿಗಳು ಕೇಸರಿ ಬಟ್ಟೆ ತ್ಯಾಗ ಮಾಡಿ, ಹಸಿರು, ಬಿಳಿ ಬಟ್ಟೆ ಧರಿಸಲಿ. ಹಿಂದೂ ಧಾರ್ಮಿಕ ಸಂಪ್ರದಾಯಗಳಿಗೆ ಅಪಮಾನ ಮಾಡುವುದು ಸ್ವಾಮೀಜಿಗಳ ಉದ್ದೇಶ ಎಂದು ಕಿಡಿಕಾರಿದರು.ಮಹಾಸಭಾ ವಿಸರ್ಜಿಸಲಿ:
ಹುಬ್ಬಳ್ಳಿಯ ಏಕತಾ ಸಮಾವೇಶ ಬ್ಲಾಕ್‌ಮೇಲ್ ಸಮಾವೇಶ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು ಬಿ.ಎಸ್.ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಹಾಗೂ ಈಶ್ವರ ಖಂಡ್ರೆ ಅವರ ಕುಟುಂಬದ ಕೈಲಿ ಸಿಲುಕಿ ನಲುಗುತ್ತಿದೆ. ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ನಡೆಸಿದಾಗ ಸರ್ಕಾರ ಅವರ ಮೇಲೆ ಲಾಠಿ ಚಾರ್ಜ್ ನಡೆಸಿತು. ಆ ಸಂದರ್ಭ ಮಹಾಸಭಾ ನಾಯಕರು ಮೌನ ವಹಿಸಿದ್ದು ಯಾಕೆ? ಸಮಾಜದ ಮೇಲೆ ಕಳಕಳಿಯಿದ್ದರೆ ಈ ಮೂರು ಮಂದಿ ಹೊರಗೆ ಬಂದು, ಮಹಾಸಭಾ ವಿಸರ್ಜಿಸಬೇಕು. ಕುಟುಂಬದ ಸ್ವಾರ್ಥ ರಾಜಕಾರಣಕ್ಕೆ ಮಹಾಸಭಾ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.