ಸಾರಾಂಶ
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದೂರದೃಷ್ಟಿಯ ಕೊರತೆಯಿಂದಾಗಿ ಇಂದು ದೇಶದಲ್ಲಿ ರುಪಾಯಿ ಮೌಲ್ಯ ಕುಸಿದು ಬೆಲೆ ಏರಿಕೆಯಿಂದ ಜನರು ತತ್ತರಿಸುವಂತಾಗಿದೆ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ತಿಕೋಟಾ
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದೂರದೃಷ್ಟಿಯ ಕೊರತೆಯಿಂದಾಗಿ ಇಂದು ದೇಶದಲ್ಲಿ ರುಪಾಯಿ ಮೌಲ್ಯ ಕುಸಿದು ಬೆಲೆ ಏರಿಕೆಯಿಂದ ಜನರು ತತ್ತರಿಸುವಂತಾಗಿದೆ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ತಾಲೂಕಿನ ಕನಮಡಿಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ಆದರೆ, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ಸ್ವಾತಂತ್ರ್ಯ ನಂತರ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಕ್ಷದ ಲಕ್ಷಾಂತರ ಹಿರಿಯರು ತ್ಯಾಗ ಮತ್ತು ಬಲಿದಾನ ಮಾಡಿ ಹುತಾತ್ಮರಾಗಿದ್ದಾರೆ. ಆದರೆ, ಇದೇ ಬಿಜೆಪಿಯವರು ಬ್ರಿಟಿಷರಿಗೆ ಬೆಂಬಲವಾಗಿ ನಿಂತಿದ್ದರು. ಸ್ವಾತಂತ್ರ್ಯದ ನಂತರ ದೇಶದ ಆಹಾರದ ಕೊರತೆ ನೀಗಿಸಲು ಜವಾಹರಲಾಲ್ ನೆಹರು ಮತ್ತು ಲಾಲ ಬಹಾದ್ದೂರ್ ಶಾಸ್ತ್ರಿ ಅವರು ಹಸಿರು ಹಾಗೂ ಕ್ಷೀರ ಕ್ರಾಂತಿ ಮಾಡಿದರು ಎಂದು ಹೇಳಿದರು.ನಾನಾ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜವ ನೀಡಿದರು. ಇಂದಿರಾ ಮತ್ತು ರಾಜೀವ ಗಾಂಧಿ ಸೂರು, ಸಂಪರ್ಕ ಕ್ರಾಂತಿ ಮಾಡಿದರು. ಆದರೆ, ಈಗ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವುಗಳನ್ನು ಖಾಸಗೀಕರಣ ಮಾಡುವ ಮೂಲಕ ಮಾರಾಟ ಮಾಡುತ್ತಿದ್ದಾರೆ. ಅಂಬಾನಿ ಮತ್ತು ಅದಾನಿ ಅವುಗಳನ್ನು ಖರೀದಿಸುತ್ತಿದ್ದಾರೆ. ಈ ನಾಲ್ಕು ಜನರ ಸಲುವಾಗಿ ದೇಶ ನಡೆಸುವಂತಾಗಿದೆ ಎಂಬ ಚರ್ಚೆ ವ್ಯಾಪಕವಾಗಿದೆ ಎಂದು ಹೇಳಿದರು.ವಿಧಾನ ಪರಿಷತ್ತ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ಬಿಜೆಪಿ ಭಾವನಾತ್ಮಕ ಹೇಳಿಕೆಗಳನ್ನು ನೀಡುತ್ತ ಕೋಮು ಭಾವನೆ ಕೆರಳಿಸಿ, ದೇಶದಲ್ಲಿ ಸಾಮರಸ್ಯ ಹಾಳು ಮಾಡುತ್ತಿದೆ. ಸರ್ವಾಧಿಕಾರಿಯ ಧೋರಣೆ ಮೂಲಕ ಪ್ರತಿಪಕ್ಷದ ನಾಯಕರ ವಿರುದ್ಧ ಇಡಿ, ಐಟಿ, ಸಿಬಿಐ ಮೂಲಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಸಂಸದ ರಮೇಶ ಜಿಗಜಿಣಗಿ ಕಳೆದ 15 ವರ್ಷಗಳಲ್ಲಿ ಜಿಲ್ಲೆಯಲ್ಲಿ ಶೂನ್ಯ ಅಭಿವೃದ್ಧಿ ಮಾಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಯಾರಿಗೂ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಹೀಗಾಗಿ ನನಗೆ ಮತ ಕೇಳುವ ಅಧಿಕಾರವಿದ್ದು, ನನಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿದರು. ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಯಾಕೂಬ್ ಜತ್ತಿ, ವಿದ್ಯಾರಾಣಿ ತುಂಗಳ, ಗೀತಾಂಜಲಿ ಪಾಟೀಲ, ಸಿದ್ದನಗೌಡ ರುದ್ರಗೌಡರ, ಎ. ಎಂ. ಬಿರಾದಾರ, ಗುರು ಮಾಳಿ, ಶಾಂತಾ ಬಿರಾದಾರ, ಮಾನಿಂಗ ಜವನರ ಮುಂತಾದವರು ಉಪಸ್ಥಿತರಿದ್ದರು.