ಸಾರಾಂಶ
ಕನ್ನಡಪ್ರಭ ವಾರ್ತೆ, ಮುಧೋಳ ತಾಪಮಾನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದು ಬಹುಮುಖ್ಯವಾದ ವಿಷಯ. ಬಿಸಿಲಿನಲ್ಲಿ ಅನಾವಶ್ಯಕವಾಗಿ ಹೊರಗಡೆ ಹೋಗುವುದನ್ನು ನಿಲ್ಲಿಸಿ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ, ಹಗುರವಾದ, ತಿಳಿ ಬಣ್ಣದ, ಸಡಿಲ ಮತ್ತು ಹತ್ತಿ ಬಟ್ಟೆಗಳನ್ನೇ ಧರಿಸಬೇಕು, ಬಿಸಿಲಿನಲ್ಲಿ ಹೊರಗಡೆ ಹೋಗುವಾಗ ರಕ್ಷಣಾತ್ಮಕ ಉಪಕರಣಗಳನ್ನು ಬಳಸಿ ಎಂದು ಮುಧೋಳ ತಾಲೂಕ ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಹೇಳಿದರು.
ಮುಧೋಳ ಎಸ್ಆರ್ ಕಂಠಿ ಕಾಲೇಜಿನ ಐಕ್ಯೂಎಸಿ ಹಾಗೂ ಕ್ರೈಟೇರಿಯಾ -7ರ ಅಡಿಯಲ್ಲಿ ತಾಲೂಕಿನ ಕಸಬಾ ಜಂಬಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆರೋಗ್ಯ ಕಾಳಜಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್, ತಂಪು ಪಾನೀಯಗಳನ್ನು, ಮಾಂಸಾಹಾರವನ್ನು ಸೇವಿಸಬಾರದು. ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಿ, ಓಆರ್‌ಎಸ್ ಅಥವಾ ಮನೆಯಲ್ಲಿಯೇ ತಯಾರಿಸಿದ ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸುವದರಿಂದ ದೇಹವನ್ನು ಮರು-ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು.ಕಸಬಾ ಜಂಬಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಸುನೀಲ ಬೆನೂರ ಮಾತನಾಡಿ, ಮನೆ ಯಾವತ್ತೂ ತಂಪಾಗಿರಲಿ, ಪರದೆಗಳು, ಶೆಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಿ ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಿರಿ, ಫ್ಯಾನ್, ಒದ್ದೆ ಬಟ್ಟೆಗಳನ್ನು ಬಳಸಿ ಮತ್ತು ಆಗಾಗ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ತಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಸಹಕಾರಿ ಆಗಲಿದೆ ಎಂದು ಸಲಹೆಗಳನ್ನು ನೀಡಿದರು.ಎಸ್ಆರ್ ಕಂಠಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಮಾತನಾಡಿ, ಅತಿಯಾದ ಬಿಸಿಲಿನಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ವೈದ್ಯರ ಸಲಹೆಗಳನ್ನು ಪಾಲಿಸಿ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಿ ಎಂದು ಹೇಳಿದರು.ಐಕ್ಯೂಎಸಿ ಕ್ರೈಟೇರಿಯಾ-7ರ ಅಧ್ಯಕ್ಷ ಪ್ರೊ.ಕೆ.ಎಸ್.ಮಾಲಾಪೂರ, ಸದಸ್ಯರಾದ ಡಾ.ಸುರೇಶ ಮೋದಿ, ರವಿ ಗೌಡರ, ಎಸ್.ಪಿ.ಸಂಗಳಿ, ವ್ಹಿ.ಎಸ್.ಮುನವಳ್ಳಿ ಮುಂತಾದವರು ಇದ್ದರು. ಪ್ರೊ.ಎ.ಎಚ್.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ಲಕ್ಷ್ಮೀ ಬಿರಾದಾರ ಸ್ವಾಗತಿಸಿ, ನಿರೂಪಿಸಿದರು, ಪ್ರೊ.ಪ್ರೀತಿ ಕರಡಿ ವಂದಿಸಿದರು.
ಕಸಬಾ ಜಂಬಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ರೋಗಿಗಳು, ಎಸ್.ಆರ್.ಕಂಠಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.