- ಸಂಸದೆ ಡಾ.ಪ್ರಭಾ ತಮ್ಮ ನಿಲುವು ಸ್ಪಷ್ಟಪಡಿಸಲಿ: ಕೆ.ಎಸ್.ನವೀನ - ದಾವಣಗೆರೆ ದಕ್ಷಿಣ ಕ್ಷೇತ್ರ ಸಂಪೂರ್ಣ ಕಡೆಗಣನೆ: ಗಾಯತ್ರಿ ಸಿದ್ದೇಶ್ವರ್ ಟೀಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ಮಸೂದೆಗೆ ಸೋಲಿಸುವ ಮೂಲಕ ದೇಶದ ಮಹಿಳೆಯರಿಗೆ ಕಾಂಗ್ರೆಸ್ ಅವಮಾನಿಸಿದ್ದು, ಮಹಿಳೆಯರ ಏಳಿಗೆ ಸಹಿಸದ ಕಾಂಗ್ರೆಸ್ಸಿಗೆ ನಮ್ಮ ಧಿಕ್ಕಾರವಿದೆ ಎಂದು ಬಿಜೆಪಿ ಎಂಎಲ್ಸಿ ಕೆ.ಎಸ್.ನವೀನ್ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ಸೋಲಿಸುವ ಮೂಲಕ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನೇ ಕಸಿದಿದ್ದು, 2034ನೇ ಇಸ್ವಿ ಬಂದರೂ ಶೇ.33 ಮೀಸಲಾತಿ ಸಿಗದಂತಹ ಸನ್ನಿವೇಶಕ್ಕೆ ಕಾರಣ‍ವಾಗಿವೆ ಎಂದರು.


ಮಹಿಳಾ ರಾಜಕೀಯ ಪ್ರಾತಿನಿಧ್ಯಕ್ಕೆ ಅವಕಾಶ ನೀಡಿದ್ದರೆ ಅದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಿತ್ತು. ಇದು ಕೇವಲ ಬಿಜೆಪಿ ಮತ್ತು ಮಿತ್ರಪಕ್ಷಗಳ ಪ್ರಯತ್ನವಲ್ಲ. ಎಲ್ಲ ಪಕ್ಷಗಳ ಪ್ರಯತ್ನ ಇದರ ಹಿಂದಿದೆ ಎಂಬುದಾಗಿ ಸ್ವತಃ ಕಾಂಗ್ರೆಸ್ ಮತ್ತು ಇಂಡಿ ಕೂಟದ ಪಕ್ಷಗಳೇ ಬಿಂಬಿಸಬಹುದಿತ್ತು. ಆದರೆ, ಕಾಂಗ್ರೆಸ್ ಮತ್ತು ಇಂಡಿ ಕೂಟದ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಗೆ ಸೋಲಿಸಿ ದೇಶದ ಸಮಸ್ತ ಮಹಿಳೆಯರಿಗೆ ಅನ್ಯಾಯ ಮಾಡಿವೆ ಎಂದು ದೂರಿದ ಅವರು, ಮಹಿಳಾ ರಾಜಕೀಯ ಪ್ರಾತಿನಿಧ್ಯದ ಪರ ನಿಲ್ಲಬೇಕಾದ ದಾವಣಗೆರೆ ಸಂಸದರು ಕೇವಲ ಕುಟುಂಬ ರಾಜಕಾರಣ ಮಾಡಿದ್ದಾರೆ ಎಂದು ಟೀಕಿಸಿದರು.

ಗ್ಯಾರಂಟಿಗಳು, ₹2 ಸಾವಿರ ಕೊಟ್ಟರೆ ಮಹಿಳೆಯರಿಗೆ ಪ್ರಾತಿನಿಧ್ಯ ಕೊಟ್ಟಂತಾಗುವುದಿಲ್ಲ. ಮಹಿಳಾ ಮೀಸಲಾತಿ ಮಸೂದೆಗೆ ವಿರೋಧಿಸುವ ಮೂಲಕ ಕಾಂಗ್ರೆಸ್‌ನ ನಿಜಬಣ್ಣ ಬಯಲಾಗಿದೆ. ಪ್ರತಿ 10 ವರ್ಷಕ್ಕೊಮ್ಮೆ ಕ್ಷೇತ್ರ ಪುನರ್ವಿಂಗಣೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲೇ ಅವಕಾಶ ಮಾಡಿಕೊಟ್ಟಿದ್ದರೂ ಕಾಂಗ್ರೆಸ್ಸಿಗೆ ಮಹಿಳಾ ರಾಜಕೀಯ ಪ್ರಾತಿನಿಧ್ಯ ಸಿಗಬೇಕೆಂದ ಕಾಳಜಿ ಸೋನಿಯಾ ಗಾಂಧಿಯಿಂದ ದಾವಣಗೆರೆ ಸಂಸದೆ ಡಾ.ಪ್ರಭಾವರೆಗೆ ಯಾರಿಗೂ ಇಲ್ಲ ಎಂದು ಕೆ.ಎಸ್.ನವೀನ ಆರೋಪಿಸಿದರು.

ಪಕ್ಷದ ಮಹಿಳಾ ಮೋರ್ಚಾದ ಹಿರಿಯ ನಾಯಕಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಯಾವುದೇ ಒಳ್ಳೆಯ ಕೆಲಸ ಮಾಡಬೇಕೆಂದರೂ ಕಾಂಗ್ರೆಸ್ ವಿರೋಧ ಮಾಡುತ್ತಲೇ ಬರುತ್ತಿದೆ. ಈ ಹಿಂದೆ ತ್ರಿವಳಿ ತಲಾಖ್ ಸೇರಿದಂತೆ ಹಲವಾರು ವಿಚಾರಗಳಲ್ಲಿ ಇದೇ ರೀತಿ ಕಾಂಗ್ರೆಸ್ಸಿನವರು ವಿರೋಧ ಮಾಡಿದ್ದರು. ಮಹಿಳೆಯರ ಏಳಿಗೆ ಸಹಿಸದ ಕಾಂಗ್ರೆಸ್‌ಗೆ ಧಿಕ್ಕಾರ ಹೇಳುತ್ತೇವೆ. ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಹ ಮಹಿಳಾ ಮೀಸಲಾತಿ ಮಸೂದೆ ವಿರುದ್ಧವಾಗಿ ನಿಂತಿದ್ದಾರೆ ಎಂದರು.

ದಾವಣಗೆರೆ ದಕ್ಷಿಣ ಕ್ಷೇತ್ರ ದಶಕಗಳಿಂದಲೂ ಯಾವುದೇ ಅಭಿವೃದ್ಧಿ ಕಾಣದೇ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ದಕ್ಷಿಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ. ಸಿಮೆಂಟ್ ರಸ್ತೆಗಳನ್ನು ಮಾಡಿದ್ದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಬಗ್ಗೆ ಟೀಕಿಸುತ್ತಾರೆ. ಅದೇ ಸಿದ್ದೇಶ್ವರ ದಾವಣಗೆರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನೂರಾರು ಕೋಟಿ ರು. ಅನುದಾನ ಇಲ್ಲಿಗೆ ತಂದಿದ್ದನ್ನು ಮರೆಯಬಾರದು ಎಂದು ಹೇಳಿದರು.

ಗರೀಬೀ ಹಠಾವೋ ಅಂತಾ 70ರ ದಶಕದಿಂದಲೂ ಹೇಳಿಕೊಂಡು ಬಂದ ಕಾಂಗ್ರೆಸ್ ಏನು ಮಾಡಿದೆ? ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಜನರನ್ನು ಗ್ಯಾರಂಟಿ ಯೋಜನೆಗಳ ಗುಲಾಮರಂತೆ ಬಿಂಬಿಸುತ್ತಿದ್ದಾರೆ. 5 ಗ್ಯಾರಂಟಿ ಕೊಟ್ಟಿದ್ದೇವೆ, ಯಾವ ಉಪಕಾರಕ್ಕೆ ಮತ ಹಾಕುತ್ತಾರೆಂಬ ಧೋರಣೆ ಕಾಂಗ್ರೆಸ್ಸಿಗರಿಗೆ ಇದೆ. ದಾವಣಗೆರೆ ದಕ್ಷಿಣದ ಜನರ ಪರಿಸ್ಥಿತಿ ಏನೆಂಬುದು ಅಲ್ಲಿಗೆ ಹೋಗಿಬಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಗ್ಯಾರಂಟಿ ಜೊತೆಗೆ ಓಟಿಗೆ ₹2 ಸಾವಿರ ಕೊಡುತ್ತೇವೆಂದು ಹಂಚಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಮೇಯರ್ ಡಿ.ಎಸ್. ಉಮಾ ಪ್ರಕಾಶ, ಜಿಪಂ ಮಾಜಿ ಅಧ್ಯಕ್ಷೆ ಸಹನಾ ರವಿ, ಪಾಲಿಕೆ ಮಾಜಿ ಸದಸ್ಯೆ ರೇಖಾ ಸುರೇಶ ಗಂಡುಗಾಳೆ, ಮಹಿಳಾ ಮೋರ್ಚಾ ಮುಖಂಡರಾದ ಎಚ್‌.ಸಿ.ಜಯಮ್ಮ, ಭಾಗ್ಯ ಪಿಸಾಳೆ, ರೇಣುಕಾ ಇತರರು ಇದ್ದರು.

- - -

-25ಕೆಡಿವಿಜಿ3, 4: ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಎಂಎಲ್‌ಸಿ ಕೆ.ಎಸ್.ನವೀನ, ಮಹಿಳಾ ಮೋರ್ಚಾ ಹಿರಿಯ ನಾಯಕ ಗಾಯತ್ರಿ ಸಿದ್ದೇಶ್ವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.