ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸೋಲಿಸಿದ ಕಾಂಗ್ರೆಸ್‌ಗೆ ಮಹಿಳೆಯರು ಅಂದ್ರೆ ಬರೀ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮಾತ್ರ ಅಂದುಕೊಂಡಂತಿದೆ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ವಾಗ್ದಾಳಿ ನಡೆಸಿದ್ದಾರೆ.
- ಮಹಿಳಾ ಮೀಸಲಾತಿ ಮಸೂದೆ ಸೋಲಿಸಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ । ಪಪ್ಪು ಯಾದವ್ ವಿರುದ್ಧ ಕ್ರಮ ಕೈಗೊಳ್ಳಲಾಗದ ಸ್ಥಿತಿಯ ಪಕ್ಷ: ಟೀಕೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸೋಲಿಸಿದ ಕಾಂಗ್ರೆಸ್‌ಗೆ ಮಹಿಳೆಯರು ಅಂದ್ರೆ ಬರೀ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮಾತ್ರ ಅಂದುಕೊಂಡಂತಿದೆ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ವಾಗ್ದಾಳಿ ನಡೆಸಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಕಲ್ಪಿಸುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾದರೆ, ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟದ ಪಕ್ಷಗಳು ಮೈತ್ರಿಯನ್ನು ಸೋಲಿಸುವ ಮೂಲಕ ವಿಕೃತಿ ಮೆರೆದು, ಅದನ್ನು ಸಂಭ್ರಮವಾಗಿ ಆಚರಿಸಿವೆ ಎಂದರು.
ದೇಶದಲ್ಲ ದೊಡ್ಡ ದೊಡ್ಡ ಲೋಕಸಭಾ ಕ್ಷೇತ್ರಗಳಿದ್ದು, ಅಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸುವುದು, ಕ್ಷೇತ್ರಗಳ ಅಭಿವೃದ್ಧಿಗೆ ಸಂಸದರು ಹೆಚ್ಚು ಗಮನಹರಿಸಲು ಅನುವಾಗುವಂತೆ ಕ್ಷೇತ್ರಗಳ ಪುನರ್ವಿಂಗಡಣೆಗೆ ಕೇಂದ್ರ ಮುಂದಾಗಿತ್ತು. ಆದರೆ, ಅದಕ್ಕೆಲ್ಲಾ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ವಿರೋಧಿಸಿ, ಮಸೂದೆಯನ್ನೇ ಸೋಲಿಸಿವೆ ಎಂದು ದೂರಿದರು.ಕಾಂಗ್ರೆಸ್ ಅಭಿವೃದ್ಧಿ ಪರ ಇಲ್ಲ, ಮಹಿಳೆಯರ ಪರವಾಗಿಯೂ ಇಲ್ಲ. ಇಂತಹ ಕಾಂಗ್ರೆಸ್ಸಿಗೆ ಜನತೆ ತಕ್ಕ ಪಾಠ ಕಲಿಸುವ ದಿನಗಳೂ ಇನ್ನು ದೂರವಿಲ್ಲ. ಕಾಂಗ್ರೆಸ್ಸಿಗೆ ಮಹಿಳೆಯರ ಬಗ್ಗೆ ಎಷ್ಟು ಗೌರವ, ಕಾಳಜಿ ಇದೆಯೆಂಬುದು ಇದರಿಂದಲೇ ಅರ್ಥವಾಗುತ್ತದೆ. ಗೂಂಡಾ ಸಂಸ್ಕೃತಿಯ, ಸ್ತ್ರೀವಿರೋಧಿ ಮನಸ್ಥಿತಿಯ ಸಂಸದ ಪಪ್ಪು ಯಾದವ್ ಬೆಡ್ ರೂಂಗೆ ಹೋಗದಿದ್ದರೆ ಮಹಿಳೆಯರಿಗೆ ರಾಜಕೀಯದಲ್ಲಿ ಭವಿಷ್ಯವಿಲ್ಲವೆಂಬ ಹೇಳಿಕೆ ನೀಡಿರುವುದು ದುರಂತ. ಅಂತಹ ಪಪ್ಪು ಯಾದವ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಿರಲಿ, ತಿಳಿಹೇಳುವ, ನೋಟಿಸ್ ನೀಡುವ ಶಕ್ತಿಯೂ ಕಾಂಗ್ರೆಸ್ಸಿನ ವರಿಷ್ಠರಿಗೆ ಇಲ್ಲ ಎಂದು ಟೀಕಿಸಿದರು.
ಇಂದಿರಾ ಗಾಂಧಿ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ನಾಮಕಾವಸ್ತೆಗೆ ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಇಂದಿರಾ ನಂತರ ಸೋನಿಯಾ ಗಾಂಧಿ, ಈಗ ಪ್ರಿಯಾಂಕಾ ಗಾಂಧಿ ಇದ್ದಾರೆ. ಇಂತಹ ಮಹಿಳೆಯರು ನಾಯಕತ್ವ ಹೊಂದಿರುವ ಕಾಂಗ್ರೆಸ್ ಪಕ್ಷ ಸಂಸದ ಪಪ್ಪು ಯಾದವ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಇಂತಹವರಿಂದ ಮಹಿಳೆಯರಿಗೆ ಗೌರವವಾದರೂ ಇರುತ್ತದಾ? ಇಂತಹ ಪಕ್ಷ ಮತ್ತು ಸಂಸದರಿಂದ ಜನರು, ವಿಶೇಷವಾಗಿ ಮಹಿಳೆಯರು ಯಾವ ರೀತಿ ಗೌರವ ನಿರೀಕ್ಷಿಸಲು ಸಾಧ್ಯ ಎಂದು ಬಿ,ಪಿ,.ಹರೀಶ ಪ್ರಶ್ನಿಸಿದರು.ಪಕ್ಷದ ಮುಖಂಡರಾದ ಟಿಂಕರ್ ಮಂಜಣ್ಣ, ಬಾಲಚಂದ್ರ ಶ್ರೇಷ್ಠಿ, ಶಿವನಗೌಡ ಟಿ.ಪಾಟೀಲ, ಕಿಶೋರಕುಮಾರ, ಮಂಜುನಾಥ, ರೇಣುಕಾಮೂರ್ತಿ ಇತರರು ಇದ್ದರು.
- - -(ಬಾಕ್ಸ್-1)
* ಕಾಂಗ್ರೆಸ್ಸಲ್ಲಿ ಶ್ರೀಮಂತರ ವಿರುದ್ಧ ಶಿಸ್ತು ಕ್ರಮವಿಲ್ಲ- ಉಪ ಚುನಾವಣೆ ವೇಳೆ ಸಚಿವರ ಸುತ್ತಾಟ, ಅಧಿಕಾರಿಗಳ ಅಸಡ್ಡೆಗೆ ಬಿ.ಪಿ.ಹರೀಶ ಕಿಡಿ ದಾವಣಗೆರೆ: ದಾವಣಗೆರೆ ದಕ್ಷಿಣ ಉಪ ಚುನಾವಣೆ ನಂತರ ಅಲ್ಪಸಂಖ್ಯಾತ ನಾಯಕರು, ಸಾಮಾನ್ಯರ ಮೇಲೆ ಇನ್ನೂ ಫಲಿತಾಂಶವೇ ಬಂದಿಲ್ಲದಿದ್ದರೂ ಕ್ರಮ ಕೈಗೊಂಡ ಎಐಸಿಸಿ, ಕೆಪಿಸಿಸಿ ಶಿಸ್ತು ಸಮಿತಿಯು ಹಿಂದೆ ಶಾಮನೂರು ಶಿವಶಂಕರಪ್ಪನವರು ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿ ಅಂದಾಗ ಸತ್ತು ಹೋಗಿದ್ದವಾ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಎದುರಾಳಿ ಪಕ್ಷದ ಅಭ್ಯರ್ಥಿಗೆ ಗೆಲ್ಲಿಸಿ ಅಂದಾಗ ಕಾಂಗ್ರೆಸ್ಸಿನ ಶಿಸ್ತು ಸಮಿತಿ ಒಂದಾದರೂ ನೋಟಿಸ್ ನೀಡಿತ್ತಾ? ಯಾವುದೇ ರಾಜಕೀಯ ಪಕ್ಷವಿರಲಿ ದೊಣೆ ನಾಯಕರಿಗೆ ಶಿಸ್ತು ಸಮಿತಿ ಅನ್ವಯಿಸುವುದಿಲ್ಲ. ನನ್ನನ್ನೂ ಸೇರಿಕೊಂಡೇ ಈ ಮಾತುಗಳನ್ನು ನಾನು ಹೇಳುತ್ತಿದ್ದೇನೆ ಎಂದರು.ಮುಸ್ಲಿಂ ಮುಖಂಡ ಸೈಯದ್ ಸೈಫುಲ್ಲಾ ಹೆಸರಿಗೆ 2008ರಲ್ಲಿ ಬಿ ಫಾರಂ ನೀಡಿದ್ದರೂ, ಸೈಫುಲ್ಲಾ ಹೆಸರು ಅಳಿಸಿ, ಯಾರ ಹೆಸರನ್ನು ಬರೆದರು? ಬಿ ಫಾರಂ ಕಸಿದುಕೊಂಡು, ತಿದ್ದಿದವರ ವಿರುದ್ಧ ಯಾವ ಕ್ರಮವನ್ನು ಕಾಂಗ್ರೆಸ್ ಕೈಗೊಂಡಿತ್ತು? ಕಾಂಗ್ರೆಸ್ ಶಾಸಕ ಪಕ್ಷವಿರೋಧಿ, ಪಕ್ಷವಿರೋಧಿ ನಡೆ ಅನುಸರಿಸಿದರೂ ಯಾವುದೇ ಕ್ರಮ ಆಗುವುದಿಲ್ಲ. ದುಡ್ಡು ಕೊಟ್ಟು ಪಕ್ಷ ನಡೆಸುತ್ತಾರೆ, ದುಡ್ಡು ಕೊಟ್ಟು ಟಿಕೆಟ್ ಪಡೆಯುತ್ತಾರೆ. ಶ್ರೀಮಂತರಿಗೆ ಶಿಸ್ತು ಸಮಿತಿ ಇರೊಲ್ಲವೇ ಎಂದು ವ್ಯಂಗ್ಯವಾಡಿದರು.
ದಕ್ಷಿಣ ಉಪ ಚುನಾವಣೆ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ರಾಜಾರೋಷವಾಗಿ ದುಡ್ಡು ಹಂಚಲು ಸುತ್ತಾಡಿದ್ದಾರೆ. ಚುನಾವಣೆಗೆ 2 ದಿನ ಮುಂಚೆ ಅನ್ಯ ಕ್ಷೇತ್ರದವರು ಕ್ಷೇತ್ರದಲ್ಲಿ ಇರಬಾರದು. ಆದರೆ, ಸಚಿವರು ಚುನಾವಣೆ ಹಿಂದಿನ ರಾತ್ರಿ ಕ್ಷೇತ್ರದಲ್ಲಿ ಅಡ್ಡಾಡಿದರು. ಲೂಟಿ ಮಾಡಿದ್ದ ಭ್ರಷ್ಟಾಚಾರದ ಹಣವನ್ನೇ ಹಂಚಲು ಸುತ್ತಾಡಿದರು. ಕಾನೂನಿಗೆ ಗೌರವ ಕೊಡದೇ ಕ್ಷೇತ್ರದ ಆಜಾದ್ ನಗರ, ಬಾಷಾ ನಗರದಲ್ಲಿ ಸುತ್ತಾಡಿದ ಬಗ್ಗೆ ದೂರಿದರೆ ಪೊಲೀಸ್ ಅಧಿಕಾರಿಗಳು ಲೊಕೇಷನ್ ಕಳಿಸಿ ಎನ್ನುತ್ತಾರೆ. ಜಿಲ್ಲೆಯ ಆಡಳಿತ ಯಂತ್ರ ಸಚಿವರ ಕಪಿಮುಷ್ಟಿಯಲ್ಲಿದೆ ಎಂದು ಅವರು ಆರೋಪಿಸಿದರು.ಇಲಾಖೆಯನ್ನು, ಅಧಿಕಾರಿಗಳನ್ನು ತಮ್ಮ ಮನೆಯ ಸೇವಕರಂತೆ ಸಚಿವರು ಬಳಸುತ್ತಿದ್ದಾರೆ. ಮುಖ್ಯಮಂತ್ರಿಗೂ ಓರ್ವ ಶಾಸಕನನ್ನು ಪ್ರಶ್ನಿಸಲು ಆಗುತ್ತಿಲ್ಲ. ಸಚಿವರಾದವರಿಗಾದರೂ ಕಾನೂನಿನ ಅರಿವು, ಜ್ಞಾನ ಬೇಡವೇ? ಮಂತ್ರಿಯೇ ಹೀಗೆ ಮಾಡಿದರೆ ಪೊಲೀಸರು ಏನು ಮಾಡಲು ಸಾಧ್ಯ? ಐಎಎಸ್, ಐಪಿಎಸ್ ಮಾಡಿ ಅಧಿಕಾರಿಗಳಾಗಿದ್ದಾರೋ ಅಥವಾ ಹುದ್ದೆಗಳನ್ನು ಇಂತಹ ಅಧಿಕಾರಿಗಳು ಕೊಂಡುಕೊಂಡಿದ್ದಾರಾ ಎಂಬ ಭಾವನೆ ಮೂಡುತ್ತಿದೆ. ಸ್ವತಃ ನಾನೇ ಎಸ್‌ಪಿ ಅವರಿಗೆ ಕರೆ ಮಾಡಿದರೆ ಸಚಿವರು ಆನೆಕೊಂಡ ರೈಸ್ ಮಿಲ್ ಹೋಗಿದ್ದಾರೆ ಎನ್ನುತ್ತಾರೆ. ಆ ಮಿಲ್ ಉತ್ತರ ಕ್ಷೇತ್ರದಲ್ಲಿ ಇದೆಯಾ ಎಂದು ಬಿ.ಪಿ.ಹರೀಶ ಕಿಡಿಕಾರಿದರು.
- - --25ಕೆಡಿವಿಜಿ1, 2: ದಾವಣಗೆರೆಯಲ್ಲಿ ಶನಿವಾರ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.