ಸಿಎಂ ‘ಯುದ್ಧ’ ಹೇಳಿಕೆಗೆ ಕಾಂಗ್ರೆಸ್‌ ಸಮರ್ಥನೆ

| N/A | Published : Apr 28 2025, 12:47 AM IST / Updated: Apr 28 2025, 10:11 AM IST

CM Siddaramaiah (File Photo/ANI)

ಸಾರಾಂಶ

 ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಪಕ್ಷದವರು ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕರು ಸಿದ್ದು ಪರ ಬ್ಯಾಟಿಂಗ್‌ ಮಾಡಿದ್ದಾರೆ.

  ಬೆಂಗಳೂರು : ಪಹಲ್ಗಾಂ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಜೊತೆ ಯುದ್ಧ ಬೇಕಿಲ್ಲ, ಭದ್ರತೆ ಬಿಗಿ ಮಾಡಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಪಕ್ಷದವರು ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕರು ಸಿದ್ದು ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ। ಜಿ.ಪರಮೇಶ್ವರ್‌, ಶಾಂತಿ ದೃಷ್ಟಿಕೋನದಿಂದ ಸಿದ್ದರಾಮಯ್ಯನವರು ಹಾಗೆ ಹೇಳಿದ್ದಾರೆ. ಭಾರತ ಯಾವಾಗಲೂ ಶಾಂತಿಯನ್ನು ನಂಬಿಕೊಂಡಿದೆ. ಭಾರತ ಯಾವಾಗಲೂ ಏಕಾಏಕಿ ಯುದ್ಧ ಮಾಡಲು ಹೋಗಿಲ್ಲ. ಆದರೆ, ನಮ್ಮನ್ನು ಕೆಣಕಿದಾಗ ಪ್ರತಿಕ್ರಿಯೆ ಕೊಟ್ಟಿದ್ದೇವೆ. ಆ ಅರ್ಥದಲ್ಲಿ ಮುಖ್ಯಮಂತ್ರಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನು ನಮ್ಮ ದೌರ್ಬಲ್ಯ ಎಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ ಎಂದು ಸಿದ್ದು ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಮಧ್ಯೆ, ಮಂಡ್ಯದಲ್ಲಿ ಮಾತನಾಡಿದ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ಉಗ್ರರ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ರೀತಿಯ ಕ್ರಮಕ್ಕೂ ನಮ್ಮ ಬೆಂಬಲವಿರುತ್ತದೆ. ರಾಷ್ಟ್ರದ ರಕ್ಷಣೆ ವಿಚಾರದಲ್ಲಿ ನಾವು ಎಂದಿಗೂ ರಾಜಕೀಯ ಮಾಡುವುದಿಲ್ಲ. ದೇಶದ ಜನರ ಪ್ರಾಣ ಉಳಿಸುವ ಕಡೆಗೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಈಗ ಹೋಗಿರುವ ಪ್ರಾಣಗಳನ್ನು ವಾಪಸ್‌ ತರಲಾಗುವುದಿಲ್ಲ. ಅದಕ್ಕಾಗಿ ಯುದ್ಧಕ್ಕಿಂತ ರಕ್ಷಣೆ ನಮಗೆ ಮುಖ್ಯ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.

ರಾಯಚೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಉಗ್ರಪ್ಪ, ಭದ್ರತಾ ಲೋಪದಿಂದ ಪಹಲ್ಗಾಂನಲ್ಲಿ ಉಗ್ರರ ದಾಳಿ ನಡೆದಿದೆ. ಈ ಅರ್ಥದಲ್ಲಿ ಸಿದ್ದರಾಮಯ್ಯ ಭದ್ರತೆಯನ್ನು ಬಿಗಿಗೊಳಿಸಿ ಎಂದಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

 ಇದೇ ವೇಳೆ, ಬೆಂಗಳೂರಿನಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪರೋಕ್ಷವಾಗಿ ಸಿದ್ದು ಪರ ಬ್ಯಾಟ್‌ ಬೀಸಿದ್ದಾರೆ. ಪಾಕಿಸ್ತಾನದ ಮೇಲೆ ಯುದ್ಧ ಬೇಡ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಆದರೆ, ಭಾರತ ಉಳಿಯಬೇಕು ಎನ್ನುವುದು ನಮ್ಮ ನಿಲುವು ಎನ್ನುವ ಮೂಲಕ ಸಿದ್ದು ಪರ ಪರೋಕ್ಷವಾಗಿ ಬ್ಯಾಟ್‌ ಬೀಸಿದ್ದಾರೆ. ಖರ್ಗೆ ಮಾತನಾಡಿ, ದೇಶಕ್ಕಾಗಿ ಹೋರಾಟ ಮಾಡುತ್ತೇವೆ ಎಂದರೆ ಅದಕ್ಕೆ ನಮ್ಮ ಬೆಂಬಲವಿದೆ. ಅಂತಿಮವಾಗಿ ದೇಶದ ರಕ್ಷಣೆ, ಭದ್ರತೆ ಮುಖ್ಯ ಎನ್ನುವ ಮೂಲಕ ಸಿದ್ದು ಪರ ನಿಂತಿದ್ದಾರೆ.