ಬಸವಣ್ಣನವರ ವಚನಗಳಿಂದ ಸಮಸ್ಯೆಗಳಿಗೆ ಪರಿಹಾರ: ಮಾಜಿ ಮೇಯರ್ ಎಸ್.ಟಿ.ವೀರೇಶ

| Published : Apr 28 2025, 12:46 AM IST / Updated: Apr 28 2025, 12:47 AM IST

ಬಸವಣ್ಣನವರ ವಚನಗಳಿಂದ ಸಮಸ್ಯೆಗಳಿಗೆ ಪರಿಹಾರ: ಮಾಜಿ ಮೇಯರ್ ಎಸ್.ಟಿ.ವೀರೇಶ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಆ ಎಲ್ಲಾ ಸಮಸ್ಯೆಗಳಿಗೆ ಬಸವಣ್ಣನವರು ನೂರಾರು ವರ್ಷಗಳ ಹಿಂದೆಯೇ ಪರಿಹಾರವನ್ನು ಕೊಟ್ಟಿದ್ದಾರೆ. ಸಾಮಾಜಿಕ, ರಾಜಕೀಯ, ಪರಿಸರ ಸೇರಿದಂತೆ ಹಲವಾರು ರೀತಿಯ ಸಮಸ್ಯೆಗಳನ್ನು ನೋಡುತ್ತಿದ್ದೇವೆ. ನಮ್ಮೆಲ್ಲ ಸಮಸ್ಯೆಗಳಿಗೆ ಬಸವಣ್ಣನವರ ವಚನಗಳಿಂದ ಪರಿಹಾರ ಸಿಗುತ್ತದೆ ಎಂದು ಮಾಜಿ ಮೇಯರ್ ಎಸ್.ಟಿ.ವೀರೇಶ ಹೇಳಿದರು.

ಬಸವ ಪ್ರಭಾತ್ ಪೇರಿ, ಜನಜಾಗೃತಿ ಪಾದಯಾತ್ರೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಸ್ತುತ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಆ ಎಲ್ಲಾ ಸಮಸ್ಯೆಗಳಿಗೆ ಬಸವಣ್ಣನವರು ನೂರಾರು ವರ್ಷಗಳ ಹಿಂದೆಯೇ ಪರಿಹಾರವನ್ನು ಕೊಟ್ಟಿದ್ದಾರೆ. ಸಾಮಾಜಿಕ, ರಾಜಕೀಯ, ಪರಿಸರ ಸೇರಿದಂತೆ ಹಲವಾರು ರೀತಿಯ ಸಮಸ್ಯೆಗಳನ್ನು ನೋಡುತ್ತಿದ್ದೇವೆ. ನಮ್ಮೆಲ್ಲ ಸಮಸ್ಯೆಗಳಿಗೆ ಬಸವಣ್ಣನವರ ವಚನಗಳಿಂದ ಪರಿಹಾರ ಸಿಗುತ್ತದೆ ಎಂದು ಮಾಜಿ ಮೇಯರ್ ಎಸ್.ಟಿ.ವೀರೇಶ ಹೇಳಿದರು.

ನಗರದ 25ನೇ ವಾರ್ಡಿನ ಗಣೇಶ್ ಬಡಾವಣೆ, ಮನೋಮೆ ಲೇಔಟ್‌ನಲ್ಲಿ ಭಾನುವಾರ ಬೆಳಿಗ್ಗೆ ಬಸವ ಕೇಂದ್ರ ವಿರಕ್ತಮಠ, ಲಿಂಗಾಯತ (ವೀರಶೈವ) ತರುಣ ಸಂಘದ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಬಸವ ಪ್ರಭಾತ್ ಪೇರಿ, ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಇಡೀ ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಬಸವ ಜಯಂತಿ ಆಚರಣೆ ಮಾಡಿದ ಹೆಗ್ಗಳಿಗೆ ನಮ್ಮ ದಾವಣಗೆರೆಯ ವಿರಕ್ತಮಠಕ್ಕೆ ಇದೆ. ನಾವು ವೀರಶೈವರು, ಲಿಂಗಾಯತರು ಎಂದು ಹೇಳುತ್ತೇವೆ. ಆದರೆ ಅವುಗಳ ತತ್ವಾದರ್ಶಗಳನ್ನು ಪಾಲನೆ ಮಾಡುವುದರಲ್ಲಿ ನಾವು ಹಿಂದೆ ಉಳಿದಿದ್ದೇವೆ. ಬಸವಣ್ಣನವರ ಆದರ್ಶ, ಆಚಾರ-ವಿಚಾರಗಳ ಬಗ್ಗೆ ಪ್ರಚಾರ ಮಾಡುವ ನಿಟ್ಟಿನಲ್ಲಿ ವಿರಕ್ತಮಠ ಸಾಕಷ್ಟು ದಿಟ್ಟ ಹೆಜ್ಜೆಯನ್ನಿಟ್ಟು ಕೆಲಸ ಮಾಡುತ್ತಿದೆ. ಇಂತಹ ಕಾರ್ಯಗಳಲ್ಲಿ ನಾವು ನೀವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವಣ್ಣನವರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಸ್ವರ್ಗ ನರಕ ಕುರಿತು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಎಲ್ಲರೂ ಹೇಳುವಂತೆ ಸ್ವರ್ಗ ಮೇಲೆ, ನರಕ ಪಾತಾಳದಲ್ಲಿದೆ ಎಂದು ತಿಳಿದುಕೊಂಡಿದ್ದೇವೆ. ಸತ್ತ ಮೇಲೆ ಎಲ್ಲರೂ ಸ್ವರ್ಗಕ್ಕೆ ಹೋಗಬೇಕು, ಕೈಲಾಸಕ್ಕೆ ಹೋಗಬೇಕು ಎಂದು ಬಹಳ ಜನ ಆಸೆ ಪಡುತ್ತಾರೆ. ಸ್ವರ್ಗ ನರಕ ಮೇಲೆಯೂ ಇಲ್ಲ, ಕೆಳಗೂ ಇಲ್ಲ. ಎರಡೂ ನಮ್ಮ ನಾಲಗೆ ಮೇಲಿವೆ ಎಂದು ಬಸವಣ್ಣನವರು ಹೇಳಿದ್ದಾರೆ. ನಾವು ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡಿದಾಗ, ಮಾತನಾಡಿಸಿದಾಗ ಅಲ್ಲಿಯೇ ಸ್ವರ್ಗ ನಿರ್ಮಾಣವಾಗುವುದು. ನಾವು ಕೆಟ್ಟಪದಗಳನ್ನು ಮಾತನಾಡಿದರೆ ಅಲ್ಲೇ ನರಕ ನಿರ್ಮಾಣವಾಗುವುದು ಎಂದರು.

ಸ್ಥಳೀಯ ಬಡಾವಣೆಯ ಮುಖಂಡರಾದ ಗುರುಮೂರ್ತಿ, ಮಾಂತೇಶ, ರಾಮಚಂದ್ರಪ್ಪ, ವಿ.ಜಗದೀಶ, ಶಿವಬಸಮ್ಮ ಕಲಕೋಟಿ, ಆರ್.ಜೆ.ಉಮಾದೇವಿ, ಶಿವಣ್ಣ, ಬಾಬಣ್ಣ, ಬಕ್ಕಣ್ಣ, ದೂಡಾ ಸದಸ್ಯೆ ವಾಣಿ ಬಕ್ಕೇಶ್, ಹಾಸಬಾವಿ ಕರಿಬಸಪ್ಪ, ಬೆಳ್ಳೂಡಿ ಮಂಜುನಾಥ, ಮಹಾಂತೇಶ, ಎನ್.ಬಕ್ಕೇಶ್, ಚನ್ನಬಸವ ಶೀಲವಂತ್, ಕಣಕುಪ್ಪಿ ಮುರುಗೇಶಪ್ಪ, ಲಂಬಿ ಮುರುಗೇಶ ಇತರರು ಇದ್ದರು.

ಪ್ರಭಾತ್ ಪೇರಿಯು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಿಂದ ಹೊರಟು ಗಣೇಶ ಲೇಔಟ್‌ನ ಚೌಡಮ್ಮ ದೇವಸ್ಥಾನದಲ್ಲಿ ಮುಕ್ತಾಯಗೊಂಡಿತು.