ಕನ್ನಡಪ್ರಭ ವಾರ್ತೆ ಹಾಸನ

ಸಂಸತ್ತಿನಲ್ಲಿ ಮಹಿಳಾ ಮೀಸಲು ಮಸೂದೆ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಜೆ. ಗೌಡ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ರಾಜಕೀಯ ಸಶಕ್ತೀಕರಣಕ್ಕಾಗಿ ಕೇಂದ್ರ ಸರ್ಕಾರ ಮಂಡಿಸಿದ್ದ ಮಹತ್ವದ ಮಸೂದೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿರುವುದು ದೇಶದ ಮಹಿಳೆಯರಿಗೆ ಮಾಡಿದ ಮಹಾ ಅನ್ಯಾಯವಾಗಿದೆ. ಮಹಿಳಾ ಮೀಸಲಾತಿ ನಮ್ಮ ಪಕ್ಷದ ಮೂಲ ಸಿದ್ಧಾಂತದಲ್ಲೇ ಅಡಕವಾಗಿದೆ. ಬಿಜೆಪಿ ಯಾವಾಗಲೂ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಗೌರವ ಸಿಗಬೇಕು ಎಂಬುದು ನಮ್ಮ ನಿಲುವು. ಈ ದಿಕ್ಕಿನಲ್ಲಿ ಹಲವು ಯೋಜನೆಗಳು ಹಾಗೂ ಕಾನೂನು ಕ್ರಮಗಳನ್ನು ನಾವು ಕೈಗೊಂಡಿದ್ದೇವೆ ಎಂದು ಅವರು ಹೇಳಿದರು. ರಾಜಕೀಯ ಮೇಲಾಟದ ನಡುವೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ಸಾಮಾನ್ಯ ಮಹಿಳೆಯರ ಆಶೆಗಳನ್ನು ಕುಗ್ಗಿಸಿವೆ ಎಂದು ಆರೋಪಿಸಿದ ಅವರು, “ಇದು ಕೇವಲ ರಾಜಕೀಯ ವಿಚಾರವಲ್ಲ, ದೇಶದ ಕೋಟ್ಯಂತರ ಮಹಿಳೆಯರ ಭವಿಷ್ಯದ ಪ್ರಶ್ನೆ. ಮಸೂದೆ ಸೋಲಿಸುವ ಮೂಲಕ ಮಹಿಳೆಯರ ಹಕ್ಕನ್ನು ಕಿತ್ತುಕೊಂಡಂತಾಗಿದೆ ಎಂದು ಕಿಡಿಕಾರಿದರು.

ಮಹಿಳಾ ಹಕ್ಕುಗಳ ವಿಷಯದಲ್ಲಿ ಬಿಜೆಪಿ ಸದಾ ಸ್ಪಷ್ಟ ನಿಲುವು ಹೊಂದಿದ್ದು, ತ್ರಿಪಲ್ ತಲಾಕ್ ವಿಷಯದಲ್ಲಿಯೂ ಕೇಂದ್ರ ಸರ್ಕಾರ ದೃಢ ನಿರ್ಧಾರ ಕೈಗೊಂಡಿತ್ತು ಎಂದು ಅವರು ನೆನಪಿಸಿದರು. ಮಹಿಳೆಯರ ಗೌರವ ಮತ್ತು ಭದ್ರತೆಗೆ ಧಕ್ಕೆ ತರುವ ಪದ್ಧತಿಗಳನ್ನು ತೊಡೆದು ಹಾಕಲು ಬಿಜೆಪಿ ಸದಾ ಬದ್ಧವಾಗಿದೆ. ಇದು ಮಾತಿನಷ್ಟೇ ಅಲ್ಲ, ಕೃತ್ಯದಲ್ಲೂ ಸಾಬೀತಾಗಿದೆ ಎಂದರು.

ಎನ್‌ಡಿಎಗೆ ಮಹಿಳೆಯರ ಬಗ್ಗೆ ದಿಢೀರ್ ಪ್ರೀತಿ ಬಂದಿಲ್ಲ, ಇದು ದೀರ್ಘಕಾಲದ ಬದ್ಧತೆಯ ಫಲ ಎಂದು ಅವರು ಹೇಳಿದರು. “ಮಹಿಳಾ ಸಶಕ್ತಿಕರಣಕ್ಕಾಗಿ ಹಂತ ಹಂತವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ರಾಷ್ಟ್ರ ಮಟ್ಟದ ರಾಜಕೀಯದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನಗಳು ನಿರಂತರವಾಗಿವೆ,” ಎಂದು ವಿವರಿಸಿದರು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಮಹಿಳೆಯರಿಗೆ ಅಪಮಾನ ಮಾಡಿದ್ದು, ಅವರನ್ನು ರಾಜಕೀಯವಾಗಿ ಹಿಂದುಳಿದವರಾಗಿಯೇ ಉಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, “ಮಹಿಳೆಯರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರು ಅವರ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು. ಮುಂದಿನ ದಿನಗಳಲ್ಲಿ ಮಹಿಳಾ ಮೀಸಲು ಮಸೂದೆ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಿಜೆಪಿ ವತಿಯಿಂದ ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. “ಮನೆ ಮನೆಗೆ ತೆರಳಿ ಮಸೂದೆಯ ಅಗತ್ಯತೆ, ಅದರ ಪ್ರಯೋಜನಗಳನ್ನು ವಿವರಿಸುತ್ತೇವೆ. ಜನರಿಗೆ ಸತ್ಯ ತಿಳಿಸಿ ವಿಪಕ್ಷಗಳ ದ್ವಂದ್ವ ನಿಲುವನ್ನು ಬಹಿರಂಗಪಡಿಸುತ್ತೇವೆ,” ಎಂದು ತಿಳಿಸಿದರು.


ರಾಜಕೀಯ ಬೆಳವಣಿಗೆಗಳ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿ, ಕೆಲ ನಾಯಕರ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡುತ್ತಾ, “ಅವರ ಸಿದ್ಧಾಂತ ಅವರದು, ನಮ್ಮ ಸಿದ್ಧಾಂತ ನಮ್ಮದು” ಎಂದು ಸ್ಪಷ್ಟವಾಗಿ ಹೇಳಿದರು. ಕುಮಾರಸ್ವಾಮಿ ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಪ್ರೀತಂ ಗೌಡ, ಪ್ರತಿಯೊಬ್ಬ ರಾಜಕೀಯ ಪಕ್ಷಕ್ಕೂ ತನ್ನದೇ ಆದ ತತ್ವ, ಸಿದ್ಧಾಂತಗಳಿರುತ್ತವೆ. ಅವುಗಳನ್ನು ಜನರ ಮುಂದೆ ಇಡುವ ಹಕ್ಕು ಎಲ್ಲರಿಗೂ ಇದೆ. ಆದರೆ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದ್ದು, ಅದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ಇದೇ ವೇಳೆ ಮುಂದಿನ ಮುಖ್ಯಮಂತ್ರಿ ವಿಚಾರಕ್ಕೂ ಅವರು ಸ್ಪಷ್ಟನೆ ನೀಡಿದರು. “ಮುಂದಿನ ಸಿಎಂ ಯಾರು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಎನ್‌ಡಿಎ ನಾಯಕತ್ವದಲ್ಲಿ ಸರ್ಕಾರ ರಚನೆಯಾದರೆ, ಆ ವಿಷಯವನ್ನು ರಾಷ್ಟ್ರ ಮಟ್ಟದ ನಾಯಕರು ನಿರ್ಧರಿಸುತ್ತಾರೆ,” ಎಂದು ಹೇಳಿದರು. ತಮ್ಮ ವೈಯಕ್ತಿಕ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಅವರು, “ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ,” ಎಂದು ಸ್ಪಷ್ಟಪಡಿಸಿದರು. ಹಾಸನ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಬದ್ಧತೆ ಮುಂದುವರೆಯಲಿದೆ ಎಂದು ತಿಳಿಸಿದ ಅವರು, ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಇದೇ ವೇಳೆ ಬಿಜೆಪಿ ಮುಖಂಡೆ ಸುಲೋಚನಾ ಭಟ್ ಮಾತನಾಡಿ, ಏಪ್ರಿಲ್ ೧೬ರಂದು ಕೇಂದ್ರ ಸರ್ಕಾರ ‘ನಾರಿ ವಂದನ್’ ಮಸೂದೆ ಮಂಡಿಸಿದ್ದು, ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿತ್ತು. ಆದರೆ ಹಿಂದಿನಿಂದಲೂ ಮಹಿಳೆಯರನ್ನು ಕಡೆಗಣಿಸಿರುವ ಕಾಂಗ್ರೆಸ್ ಮಸೂದೆಯನ್ನು ವಿರೋಧಿಸಿರುವುದು ವಿಷಾದನೀಯ ಬೆಳವಣಿಗೆ ಎಂದು ಹೇಳಿದರು. ಮಹಿಳೆಯರ ಪ್ರಗತಿ ಬಗ್ಗೆ ಮಾತನಾಡುವವರು ಇದೇ ಸಂದರ್ಭದಲ್ಲಿ ತಮ್ಮ ನಿಜವಾದ ಮುಖವನ್ನು ತೋರಿಸಿದ್ದಾರೆ. ಇದು ಮಹಿಳೆಯರ ಕನಸುಗಳಿಗೆ ದೊಡ್ಡ ಹೊಡೆತ ಎಂದು ಅವರು ಅಭಿಪ್ರಾಯಪಟ್ಟರು.ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಿಮೆಂಟ್ ಮಂಜು, ಪಕ್ಷದ ಮುಖಂಡರಾದ ಗಿರೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಂಜುನಾಥ್‌. ವೇದಾವತಿ ಇತರರು ಇದ್ದರು.