ದೇಶದ ಎಲ್ಲ ವರ್ಗಗಳ ಹಿತ ಬಯಸುವ ಪಕ್ಷ ಕಾಂಗ್ರೆಸ್: ಬಸವರಾಜ ರಾಯರಡ್ಡಿ

| Published : Apr 27 2024, 01:25 AM IST

ಸಾರಾಂಶ

ಕಳೆದ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಮೋದಿ ಅವರು ಪ್ರತಿಯೊಬ್ಬರ ಖಾತೆಗೆ ₹೧೫ ಲಕ್ಷ ಹಾಕಲಿಲ್ಲ. ಯುವಕರಿಗೆ ಉದ್ಯೋಗ ನೀಡಲಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಯಲಬುರ್ಗಾ: ದೇಶದ ಎಲ್ಲ ವರ್ಗಗಳ ಹಿತ ಬಯಸುವ ಪಕ್ಷ ಕಾಂಗ್ರೆಸ್. ಆದರೆ ಬಿಜೆಪಿಗರು ಬರೀ ಜಾತಿ, ಧರ್ಮಗಳ ಹೆಸರಿನಲ್ಲಿ ಒಡೆದಾಳುವ ಮೂಲಕ ಸಣ್ಣತನ ರಾಜಕಾರಣ ಮಾಡುತ್ತಿದ್ದಾರೆ. ಅಂಥವರಿಗೆ ಮತ ಹಾಕಬೇಡಿ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆ ನಿಮಿತ್ತ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಮತಯಾಚನೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಮೋದಿ ಅವರು ಪ್ರತಿಯೊಬ್ಬರ ಖಾತೆಗೆ ₹೧೫ ಲಕ್ಷ ಹಾಕುವುದಾಗಿ ಹೇಳಿದರು, ಆದರೆ ಹಾಕಲಿಲ್ಲ. ಯುವಕರಿಗೆ ಉದ್ಯೋಗ ನೀಡಲಿಲ್ಲ. ಹೀಗೆ ಭರವಸೆ ನೀಡಿದ ಯಾವ ಯೋಜನೆಗಳನ್ನೂ ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಗೆಲುವಿಗೆ ವರದಾನವಾಗಲಿದೆ ಎಂದರು.

ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಹನುಮಂತಗೌಡ ಚೆಂಡೂರು, ಎ.ಜಿ. ಭಾವಿಮನಿ, ಬಿ.ಎಂ. ಶಿರೂರು, ಕೆರಿಬಸಪ್ಪ ನಿಡಗುಂದಿ, ಮಂಜುನಾಥ ಕಡೇಮನಿ, ಡಾ. ಶಿವನಗೌಡ ದಾನರೆಡ್ಡಿ, ಸುಧೀರ್ ಕೊರ್ಲಳ್ಳಿ, ಶರಣಪ್ಪ ಗಾಂಜಿ ಹಾಗೂ ಗ್ರಾಪಂ ಸದಸ್ಯರು ಇದ್ದರು.