ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಜೆಪಿ ಮತ ಕಳ್ಳತನ ಮಾಡುತ್ತಿದ್ದು, ಇದರ ವಿರುದ್ಧ ಹೋರಾಟ ಮಾಡುವ ಮೂಲಕ ಮತ ಕಳ್ಳತನ ಬೆಳಕಿಗೆ ತರಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಸೊರಕೆ ಹೇಳಿದರು.ನವನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆಯ ಚುನಾವಣೆಯಲ್ಲಿ ನಮ್ಮ ಮತಕ್ಷೇತ್ರದಲ್ಲಿ ಮತದಾರ ಪಟ್ಟಿಯಲ್ಲಿ ಹೆಚ್ಚುವರಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಮಹದೇವಪೂರದಲ್ಲಿ ಸಾವಿರಾರು ಸಂಖ್ಯೆಯ ಮತದಾರರು ಹೆಚ್ಚಾಗಿದ್ದರ ಕುರಿತು ಮಾಹಿತಿ ಸಂಗ್ರಹ ಮಾಡಲಾಗಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ 41 ಲಕ್ಷ ಮತದಾರರು ಹೆಚ್ಚಾದರೆ, ಬಿಹಾರದಲ್ಲಿ 68 ಲಕ್ಷ ಮತದಾರರನ್ನು ತೆಗೆದು ಹಾಕಲಾಗಿದೆ. ಇದರ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಚುನಾವಣೆಗೆ ಮಾತ್ರ ಸೀಮಿತವಾಗದೇ ಬೂತ್ ಮಟ್ಟದಿಂದ ರಾಜ್ಯಮಟ್ಟದವರಿಗೆ ಪಕ್ಷ ಸಂಘಟಿಸುವ ಮೂಲಕ ಮುಂಬರುವ ಗ್ರಾಮ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗಲು ಪ್ರಚಾರ ಸಮಿತಿ ಲಕ್ಷಾಂತರ ಕಾರ್ಯಕರ್ತರ ಸಂಘಟನೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದ ಪರಿಣಾಮ ಕರ್ನಾಟಕ ತಲಾ ಆದಾಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಸಂವಿಧಾನಕ್ಕೆಧಕ್ಕೆ,ಜಾತ್ಯಾತೀತ, ಸಮಾಜವಾದ ತೆಗೆಯುವ ಕೆಲಸ ನಡೆಯುತ್ತಿದೆ.ಸರ್ಕಾರದ ಕಾರ್ಯಕ್ರಮ ಕುರಿತು ಕಾರ್ಯಕರ್ತರು ಪ್ರಚಾರ ಮಾಡಲು ಸಂಘಟನೆಯನ್ನು ಬಲಪಡಿಸಲಾಗುತ್ತಿದೆ ಎಂದು ಹೇಳಿದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆಯ ವರದಿ ಶೀಘ್ರ ಬರಲಿದೆ. ತನಿಖೆಯಿಂದ ಎಲ್ಲವೂ ಹೊರಬೀಳಲಿದೆ. ಯಾರು ಯಾರಿಗೆ ಫಂಡಿಂಗ್ ಮಾಡುತ್ತಿದ್ದಾರೆ ಎಂಬುದು ಸಹ ಬಯಲಿಗೆ ಬರಲಿದೆ. ಧರ್ಮಸ್ಥಳ ವಿಷಯದಲ್ಲಿ ಪ್ರಭಾಕರ ಭಟ್ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಎಡಗೈ ಮತ್ತು ಬಲಗೈ ಸಮುದಾಯದವರಿಗೆ ಒಳ ಮೀಸಲಾತಿಯನ್ನು ಸಾಮಾಜಿಕ ನ್ಯಾಯದಡಿ ಜಾರಿ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕ್ರಮವನ್ನು ಸ್ವಾಗತಿಸಿ, ಸಮುದಾಯದವರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಅಜಯಕುಮಾರ ಸರನಾಯಕ, ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ, ಅಬ್ದುಲ್ ಮುನಿಯರ್, ಶರಣಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.