ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಅವುಗಳ ಹತೋಟಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬೀದಿ ನಾಯಿಗಳು ಸಣ್ಣ ಮಕ್ಕಳಿಗೆ ಕಚ್ಚಿದ ಪ್ರಕರಣಗಳು ಕಂಡುಬರುತ್ತಿವೆ. ಅಲ್ಲದೇ ರಸ್ತೆಗಳಲ್ಲಿ ವಾಹನಗಳ ಮಧ್ಯ ಬರುತ್ತಿರುವದರಿಂದ ಅಪಘಾತ ಸಂಭವಿಸುತ್ತಿವೆ. ಇವಗಳ ಹಾವಳಿಯನ್ನು ಹತೋಟಿಗೆ ತರಲು ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ರೆಬೀಸ್ ಸೋಂಕು ತಗುಲಿ ಕೆರೂರ ಮತ್ತು ಬಾದಾಮಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ರೆಬೀಸ್ ಸೋಂಕಿತ ನಾಯಿ ಹಾಗೂ ಅದರಿಂದ ಉಳಿದ ನಾಯಿಗಳಿಗೂ ಸಹ ಸೋಂಕಿತರಾಗುತ್ತಿರುವುದರಿಂದ ಬೀದಿನಾಯಿಗಳು ಕಚ್ಚಿದ ವ್ಯಕ್ತಿಗೆ ರೆಬೀಸ್ ಹರಡುತ್ತಿರುವುದರಿಂದ ಇದನ್ನು ತಡೆಯುವ ಕೆಲಸವಾಗಬೇಕು. ಜಿಲ್ಲೆಯಲ್ಲಿರುವ ಬೀದಿ ನಾಯಿಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅವುಗಳಿಗೆ ಸಂತಾಹಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.20ನೇ ಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 4937 ಬೀದಿನಾಯಿಗಳನ್ನು ಗುರುತಿಸಿದ್ದು, ಅದರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 1550, ಬಾದಾಮಿ 481, ಹುನಗುಂದ 700, ಬೀಳಗಿ 97, ಗುಳೇದಗುಡ್ಡ 590, ಜಮಖಂಡಿ 219, ಮುಧೋಳ 406, ಇಳಕಲ್ಲ 212 ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ 682 ಬೀದಿ ನಾಯಿಗಳಿದ್ದು, ಅವುಗಳಿಗೆ ಹಂತ ಹಂತವಾಗಿ ಸಂತಾಹಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಹೊಳೇಪ್ಪಗೋಳ ಅವರಿಗೆ ಸೂಚನೆ ನೀಡಿದರು. ವಾರದಲ್ಲಿ ಎರಡು ದಿನ ಶಸ್ತ್ರಚಿಕಿತ್ಸೆ ಕಾರ್ಯ ಮಾಡಲು ತಿಳಿಸಿದರು.
ವಿದ್ಯಾಗಿರಿಯ ಕೆಲವು ಎನ್‌ಜಿಒ ಸ್ವಯಂ ಪ್ರೇರಿತವಾಗಿ ಈ ಕಾರ್ಯಕ್ಕೆ ಕೈಜೋಡಿಸುತ್ತಿದ್ದು, ನಗರದಲ್ಲಿ ಶಸ್ತ್ರಚಿಕಿತ್ಸೆಗೆ ಸೂಚಿಸಿದ ಸ್ಥಳಕ್ಕೆ ನಗರದಲ್ಲಿರುವ ಬೀದಿನಾಯಿಗಳನ್ನು ಕರೆದುಕೊಂಡು ಬರುವ ಕಾರ್ಯ ಮಾಡಲಿದ್ದಾರೆ. ಈಗಾಗಲೇ ಮುಧೋಳ ಮತ್ತು ಜಮಖಂಡಿಯಲ್ಲಿ ಈ ಕಾರ್ಯ ನಡೆಯುತ್ತಿದ್ದು, ಬಾಗಲಕೋಟೆ ನಗರದಲ್ಲಿ ವ್ಯವಸ್ಥಿತವಾಗಿ ಮಾಡಲು ತಿಳಿಸಿದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಬೀದಿನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸಂತಾನ ಹರಣ ಶಸ್ತ್ರಚಿಕಿತ್ಸೆ ವ್ಯವಸ್ಥಿತವಾಗಿ ಮಾಡಬೇಕು. ಸದ್ಯ ಪಾಲಿಕ್ಲಿನಿಕ್‌ನಲ್ಲಿದ್ದ ಪಶು ವೈದ್ಯರನ್ನು ಬಳಸಿಕೊಂಡು ವಾರದಲ್ಲಿ ಎರಡು ದಿನ ಎಷ್ಟು ಸಾಧ್ಯವೋ ಅಷ್ಟು ಬಿದಿ ನಾಯಿಗಳಿಗೆ ಚಿಕಿತ್ಸೆಗೆ ಒಳಪಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರ ಸುರುಖೋಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಸೇರಿದಂತೆ ವಿವಿಧ ಎನ್ಜಿಓಗಳ ಪ್ರತಿನಿಧಿಗಳಾದ ಶ್ವೇತಾ ಹೊಸಗೌಡರ, ಸುಮಂಗಲಾ ಹದ್ಲಿ, ನಾಗರಾಜ ಹದ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.