ಕನ್ನಡಪ್ರಭ ವಾರ್ತೆ ವಿಜಯಪುರ
ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲು ಬಿಜೆಪಿ ಸರ್ಕಾರ ಮಂಡಿಸಿದ್ದ ವಿಧೇಯಕಕ್ಕೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ವಿರೋಧಿಸಿದ್ದು, ಮಹಿಳಾ ವಿರೋಧಿಗಳು ಎಂದು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರುತ್ತೇವೆ ಎಂದು ಹೇಳಿ ಬಿಜೆಪಿಯೇ ಮೋಸದಿಂದ ಮಹಿಳೆಯರನ್ನು ಸೋಲಿಸಿದೆ. ನರೆಂದ್ರ ಮೋದಿಯವರು ಮಹಿಳಾ ಮೀಸಲಾತಿ ಹೆಸರಿನಲ್ಲಿ ಸಂವಿಧಾನದ ಪರಿಚ್ಛೇದ 131 ತಿದ್ದುಪಡಿ, ಕ್ಷೇತ್ರ ಮರುವಿಂಗಡನೆ ಸೇರಿದಂತೆ ಮೋಸದಿಂದ ಬೇರೆ ಬೇರೆ ರೀತಿಯ ಮೂರು ಬಿಲ್ ತರಲು ಮುಂದಾಗಿದ್ದರು. ಇದು ಮಹಿಳೆಯರಿಗೆ ಬಿಜೆಪಿ ಮಾಡಿದ ಬಹುದೊಡ್ಡ ಅನ್ಯಾಯ ಎಂದರು.
ಇನ್ನು 2021ರಲ್ಲಿ ಆಗಬೇಕಿದ್ದ ಜನಗಣತಿ ಕರೋನಾದಿಂದ ಆಗಿರಲಿಲ್ಲ, ಆ ಜನಗಣತಿ ಆಧಾರದ ಮೇಲೆಯೇ ಮಹಿಳಾ ಮೀಸಲಾತಿ ತರಬೇಕಿತ್ತು. ಆದರೆ, ಇದುವರೆಗೂ ಜನಗಣತಿ ಮಾಡದೆ ದಕ್ಷಿಣ ಭಾರತದ ಚುನಾವಣೆ ಹಿನ್ನೆಲೆ ತಕ್ಷಣದಲ್ಲೇ ಶೇ.33 ಮಹಿಳಾ ಮೀಸಲಾತಿ ಕೊಡುತ್ತೇವೆ ಎಂದು ಬೇರೆ ಬೇರೆ ವಿಧೇಯಕಗಳನ್ನು ಸೇರಿಸಿ ಮೋಸಮಾಡಿದ್ದಾರೆ. ಬಿಜೆಪಿ ಮಂಡಿಸಿದ್ದ ಮಹಿಳಾ ಮೀಸಲಾತಿ ಅಲ್ಲ, ಅದು ಕ್ಷೇತ್ರ ವಿಂಗಡಣೆ ಮಸೂದೆಯಾಗಿದೆ ಎಂದರು.ಪ್ರಧಾನಮಂತ್ರಿಗಳು 2026ರಲ್ಲಿ ಜನಗಣತಿ ಮಾಡಿಸಿ ಅದರ ಆಧಾರದಲ್ಲಿ ಮೀಸಲಾತಿ ನೀಡುವ ಬದಲು, ಹಳೆಯ ಜನಸಂಖ್ಯೆ ಆಧಾರದ ಮೇಲೆ ಲೋಕಸಭೆಗೆ 850 ಸೀಟು ಹೆಚ್ಚಳ ಮಾಡಲು ಮುಂದಾಗಿದ್ದರು. ಆದರೆ, ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಳವಾಗಿದ್ದು, ದಕ್ಷಿಣ ಭಾರತದಲ್ಲಿ ಕಡಿಮೆಯಿದೆ. ಹಾಗಾಗಿ ಎಲ್ಲ ರಾಜ್ಯಗಳೊಂದಿಗೆ ಸಮಾಲೋಚಿಸಬೇಕಿತ್ತು. ಬಿಜೆಪಿಯವರು ಮಾಡಿದ ಕೆಲಸಕ್ಕೆ ದೇಶದ 60ಕ್ಕೂ ಅಧಿಕ ದೊಡ್ಡದೊಡ್ಡ ಸಂಘ- ಸಂಸ್ಥೆಗಳು ಇದನ್ನು ವಿರೋಧಿಸಿವೆ. ಕಾಂಗ್ರೆಸ್ ಸರ್ಕಾರ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿ ತರುವುದಾಗಿ ಸಿಎಂ ಹಾಗೂ ಡಿಸಿಎಂ ಘೋಷಿಸಿದ್ದಾರೆ. ಅವರಂತೆ ಮೀಸಲಾತಿ ತರುವುದಾದರೆ ಈಗಿರುವ ಸೀಟುಗಳಲ್ಲೇ ಶೇ.33 ಮಹಿಳಾ ಮೀಸಲಾತಿ ಜಾರಿಗೆ ತರಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕಿ ಸಂಯುಕ್ತಾ ಪಾಟೀಲ ಮಾತನಾಡಿ, 2023ರಲ್ಲೇ ಮಹಿಳಾ ಆರಕ್ಷಕ ಬಿಲ್ ತರಬಹುದಾಗಿದ್ದರೂ ಅವರು ತರಲಿಲ್ಲ. 2026ರ ಜನಗಣತಿ ಆದಮೇಲೆ ಅದರ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಿಸಬೇಕು. ಡಿಲಿಮಿಟೇಷನ್ ತಂದು ಮಹಿಳಾ ಮೀಸಲಾತಿ ಜತೆಗೆ ಸೇರಿಸುವ ಅವಶ್ಯಕತೆ ಇರಲಿಲ್ಲ. ಈಗಿರುವ 543 ಸೀಟುಗಳಲ್ಲಿಯೇ ಶೇ.33ರಷ್ಟು ಮಹಿಳಾ ಮೀಸಲಾತಿ ಕೊಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ರಮೀಜಾ ನದಾಫ್, ಮಹಾದೇವಿ ಗೋಕಾಕ, ವಿದ್ಯಾರಾಣಿ ತುಂಗಳ, ಆರತಿ ಶಹಾಪುರ, ಪ್ರಿಯಾಂಕಾ ತೊರವಿ ಇದ್ದರು.2023ರ ಬಿಲ್ ನಲ್ಲೇ ಮಹಿಳಾ ಆರಕ್ಷಣೆ ಬಿಲ್ ತರಬೇಕು ಎಂದು ಎಲ್ಲ ಪಕ್ಷಗಳು ಪ್ರಧಾನಿಗಳಿಗೆ ಮನವಿ ಮಾಡಿದ್ದವು. ಆಗ ಅವರು 2026ರಲ್ಲಿ ಆಗುವ ಜನಗಣತಿ ಆಧಾರದ ಮೇಲೆ ಮೀಸಲಾತಿ ತರುತ್ತೇವೆ ಎಂದರು. ಆದರೆ, ಈಗ ಕ್ಷೇತ್ರ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿಗೆ ಲಿಂಕ್ ಕೊಟ್ಟು ಒಮ್ಮಿಂದೊಮ್ಮೆಲೆ ವಿಧೇಯಕ ಮಂಡಿಸಿದ್ದಾರೆ. -ಸಂಯುಕ್ತಾ ಪಾಟೀಲ, ಕಾಂಗ್ರೆಸ್ ನಾಯಕಿ