ಯಲ್ಲಾಪುರ: ವರ್ಷಗಟ್ಟಲೇ ಪರಿಶ್ರಮ ವಹಿಸಿ ನೀಟ್ ಪರೀಕ್ಷೆ ಬರೆದು ಎರಡೇ ದಿನಕ್ಕೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ ಎಂದು ಪರೀಕ್ಷೆ ರದ್ದು ಮಾಡಿ, ಹೊಸ ಪರೀಕ್ಷೆ ಮಾಡಲು ಮುಂದಾದ ಕೇಂದ್ರ ಸರ್ಕಾರದ ಕ್ರಮ ಅತ್ಯಂತ ಖಂಡನೀಯ ಎಂದು ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿರುವುದು ಸರಿಯಲ್ಲ. ಕೇಂದ್ರ ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಪುನಃ ಪರೀಕ್ಷೆ ಬರೆಯುವುದಕ್ಕೆ ಶ್ರಮ ಹಾಕಬೇಕೇ? ಇದು ಸರಿಯಾದ ಕ್ರಮ ಅಲ್ಲ. ಕೇಂದ್ರ ಸರ್ಕಾರದ ನೀತಿಗೆ ಧಿಕ್ಕಾರ ಹೇಳುತ್ತೇವೆ. ಅಧಿಕಾರಿಗಳನ್ನು ಬಲಿಪಶು ಮಾಡಿ, ಸಚಿವರನ್ನು ವಜಾ ಮಾಡಿ, ಪರಿಹಾರ ನೀಡಬೇಕು. ಅಲ್ಲದೇ ಡೀಸೆಲ್, ಪೆಟ್ರೋಲ್ ಸೇರಿದಂತೆ ದಿನೇ ದಿನೇ ಆಹಾರ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಸರ್ಕಾರದ ಬಳಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗದಿದ್ದರೆ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು. ರೈತರ ಬದುಕು ಕಷ್ಟವಾಗುತ್ತಿದೆ. ಪದೇ ಪದೇ ತೆರಿಗೆ ಏರಿಸಿ ಜನರ ಹಣ ದೋಚುವ ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ನೀತಿ ವಿರೋಧಿಸುತ್ತಿದ್ದೇವೆ, ಪ್ರತಿಭಟಿಸುತ್ತಿದ್ದೇವೆ. ಸರಿಪಡಿಸದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿ.ಎಸ್. ಭಟ್ಟ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲ ರೀತಿಯಲ್ಲೂ ವಿಫಲವಾಗಿದೆ. ಹಿಂದೆ ಮನಮೋಹನ ಸಿಂಗ್ ಸೇರಿದಂತೆ ಎಲ್ಲ ಕಾಂಗ್ರೆಸ್ ಪ್ರಧಾನಿಗಳು ದೇಶವನ್ನು ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸಿದ್ದರು. ಪ್ರಧಾನಿ ಮೋದಿ ಜನಪರವಾಗಿ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎಂದರು.ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಭಟ್ಟ, ಡಾ. ರವಿ ಭಟ್ಟ ಬರಗದ್ದೆ, ಪ್ರಚಾರ ಸಮಿತಿ ಅಧ್ಯಕ್ಷ ನರಸಿಂಹ ನಾಯ್ಕ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ್ ಶಾನಭಾಗ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫೈರೋಜ್ ಶೇಖ್, ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಅಮೋಧ ಶಿರಸಿಕರ್, ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿಶ್ವಾಸ್ ನಾಯ್ಕ, ತಾಲೂಕಾಧ್ಯಕ್ಷ ಗಣೇಶ ಹೆಗಡೆ, ಉಪಾಧ್ಯಕ್ಷ ಮಹೇಶ್ ನಾಯ್ಕ, ಮಹಿಳಾ ಕಾಂಗ್ರೆಸ್‌ನ ಪೂಜಾ ನೇತ್ರೇಕರ, ಸರಸ್ವತಿ ಗುನಗಾ, ಮುಷರತ್ ಖಾನ್ ಉಪಸ್ಥಿತರಿದ್ದರು.