ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

| Published : Dec 21 2024, 01:19 AM IST

ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕೂಡಲೇ ಬಿಜೆಪಿ ಯಿಂದ ಉಚ್ಛಾಟನೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೇಂದ್ರದ ಗೃಹ ಸಚಿವ ಅಮಿತ್‌ ಶಾ-ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ವಿರುದ್ಧ ಕ್ರಮಕ್ಕೆ ಆಗ್ರಹ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕೂಡಲೇ ಬಿಜೆಪಿ ಯಿಂದ ಉಚ್ಛಾಟನೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಮತೀಯ ಭಾವನೆ ಕೆರಳಿಸಿ ಎಲ್ಲಾ ವರ್ಗದ ಜನರಿಗೆ ತೊಂದರೆ ನೀಡುವುದೇ ಬಿಜೆಪಿ ಕಾಯಕ. ಇದೀಗ ಬಿಜೆಪಿ ಹಿರಿಯ ನಾಯಕರೇ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಮನಸ್ಥಿತಿಯನ್ನು ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘ ಪರಿವಾರ ಎಂದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿಲ್ಲ. ಇನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಕೆಲಸ ಮಾಡುವ ಪಕ್ಷ. ಇವರಿಬ್ಬರೂ ತಮ್ಮ ಅಂತರಾತ್ಮದಲ್ಲಿ ದುರ್ಬಲ ವರ್ಗದವರಿಗೆ ನೆರವಾಗುವ ಕೆಲಸವನ್ನು ಎಂದೂ ಮಾಡಿಲ್ಲ. ಸಂಘ ಪರಿವಾರದವರು ಈ ಹಿಂದೆ ದಲಿತರು ಸೇರಿದಂತೆ ದುರ್ಬಲ ವರ್ಗದವರಿಗೆ ಶಿಕ್ಷಣ ಸಿಗದಂತೆ ನೋಡಿಕೊಂಡಿದ್ದರು. ಜೊತೆಗೆ ದುರ್ಬಲ ವರ್ಗದವರು ಮುಂದೆ ಬರದಂತೆ ನೋಡಿ ಕೊಂಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಬಿಜೆಪಿ ಯವರು ಎಂದೂ ಸಂವಿಧಾನವನ್ನು ಒಪ್ಪುವುದಿಲ್ಲ. ಸಂವಿಧಾನ ರಕ್ಷಣೆ ಮಾಡಬೇಕಿದ್ದ ಕೇಂದ್ರ ಗೃಹ ಸಚಿವರೇ ಇಂದು ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ನೆಹರು ಖಾಸಗಿ ಕ್ಷೇತ್ರವನ್ನು ಸಾರ್ವತ್ರೀಕರಣ ಗೊಳಿಸಿದ್ದರು. ನೆಹರು ಅವರನ್ನು ಅವಹೇಳನ ಮಾಡುವ ಬಿಜೆಪಿಯವರು ಸಾರ್ವಜನಿಕ ಆಸ್ತಿಯನ್ನು ಖಾಸಗಿಕರಣಗೊಳಿಸುತ್ತಿದ್ದಾರೆ. ಈ ಮೂಲಕ ಸಂವಿಧಾನದ ಆಶಯಗಳಿಗೆ ಬಿಜೆಪಿ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದರು.

ಪವಿತ್ರವಾದ ಸದನಗಳಲ್ಲಿ ನೀಲಿ ಚಿತ್ರ ನೋಡುವ ಸಂಸ್ಕೃತಿ ಬಿಜೆಪಿಯವರದ್ದು. ಇಂಥ ಪಕ್ಷದಲ್ಲಿರುವ ಸಿ.ಟಿ.ರವಿ ಮಹಿಳೆಯರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವುದರಲ್ಲಿ ಆಶ್ಚರ್ಯವಿಲ್ಲ. ಭಾರತ್ ಮಾತಾ ಕಿ ಜೈ ಎಂದು ಪ್ರಚಾರಕ್ಕಾಗಿ ಮಾತ್ರ ಹೇಳುವ ಬಿಜೆಪಿಯವರು ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಎಂದು ಧ್ವನಿ ಎತ್ತಲಿಲ್ಲ. ತಮ್ಮ ನಡೆ ನುಡಿಯಿಂದ ಜಿಲ್ಲೆಗೆ ಅಪಮಾನ ಮಾಡಿರುವ ಪ್ರತಿನಿಧಿ ಸದನದಲ್ಲಿ ಇರುವುದು ನಮ್ಮ ಜಿಲ್ಲೆಗೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಸಿಡಿಎ ಅಧ್ಯಕ್ಷ ಮಹಮ್ಮದ್ ನಯಾಜ್, ಪ್ರಮುಖರಾದ ಬಿ.ಎಚ್. ಹರೀಶ್, ಡಾ.ಡಿ.ಎಲ್.ವಿಜಯ್ ಕುಮಾರ್, ಎಂ.ಎಲ್.ಮೂರ್ತಿ, ಎಂ.ಸಿ.ಶಿವಾನಂದಸ್ವಾಮಿ, ಎಚ್.ಎಚ್.ದೇವರಾಜ್, ರೇಖಾ ಹುಲಿಯಪ್ಪಗೌಡ, ಕಾವ್ಯ ಹಾಗೂ ಕಾರ್ಯಕರ್ತರು ಇದ್ದರು. 20 ಕೆಸಿಕೆಎಂ 7ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.