ಸಾರಾಂಶ
ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಗೂಂಡಾ ವರ್ತನೆಯನ್ನು ಖಂಡಿಸಿ ನಗರದ ಪುನೀತ್ ರಾಜ್‌ಕುಮಾರ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ಹೊಸಪೇಟೆ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಹೇಳಿಕೆ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಹೇಳಿಕೆಯ ಸಂಪೂರ್ಣ ತುಣುಕನ್ನು ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಹಾಕದೇ ತಮಗೆ ಬೇಕಾದಷ್ಟು ಭಾಗಶಃ ತುಣುಕನ್ನು ಬಳಸಿ, ಬೇರೆ ರೀತಿಯಲ್ಲಿ ಅರ್ಥೈಸುವಂತೆ ಮಾಡುತ್ತಿದೆ. ತುಘಲಕ್ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಸಿ.ಟಿ.ರವಿ ಅವರನ್ನು ಬಂಧಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಗೂಂಡಾ ವರ್ತನೆಯನ್ನು ಖಂಡಿಸಿ ನಗರದ ಪುನೀತ್ ರಾಜ್‌ಕುಮಾರ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ಕೇಂದ್ರ ಗೃಹಮಂತ್ರಿ ಅಮಿತ್ ಶಾ ರಾಷ್ಟ್ರ ಕಂಡ ಪ್ರಬುದ್ಧ ರಾಜಕಾರಣಿಗಳಲ್ಲೊಬ್ಬರು, ಅವರು ಸಂವಿಧಾನ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಗೌರವ ಇಟ್ಟಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತ ಸಂದರ್ಭದಲ್ಲಿ ಅಂಬೇಡ್ಕರ್ ಅವರನ್ನು ನಡೆಸಿಕೊಂಡಿರುವ ರೀತಿಯನ್ನು ಸದನದಲ್ಲಿ ಹೇಳಿದ್ದಾರೆ, ಹೊರತು ಸಂವಿಧಾನ ವಿರೋಧಿ ಮಾತನ್ನು ಹೇಳಿಲ್ಲ. ಇದನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಸಾರ ಮಾಡಿ, ಸಮಾಜದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತಿದೆ. ಬೆಳಗಾವಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಅಮಾನುಷವಾಗಿ ನಡೆಸಿಕೊಂಡ ರೀತಿ ನೋಡಿದರೆ ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ತುಘಲಕ್ ಆಡಳಿತ ನಡೆಸುತ್ತಿದೆ ಎಂಬುದು ತೋರಿಸುತ್ತಿದೆ. ವಿಧಾನಸೌದದಲ್ಲಿ ಮಾರ್ಷಲ್ ಅವರ ಸಮ್ಮುಖದಲ್ಲೆ ಕೆಲವರು ಗುಂಡಾ ವರ್ತನೆ ಮಾಡಿದ್ದು ಕಾನೂನು ಸುವ್ಯವಸ್ಥೆ ದುರ್ಬಲಗೊಂಡಿದೆ ಎಂಬುದನ್ನು ತೋರಿಸುತ್ತದೆ. ಕೂಡಲೇ ಸಿ.ಟಿ.ರವಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಜಿ. ಭರಮನ ಗೌಡ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ, ಮಂಡಳ ಅಧ್ಯಕ್ಷ ಶಂಕರ್ ಮೇಟಿ, ಮುಖಂಡರಾದ ಸಾಲಿ ಸಿದ್ದಯ್ಯಸ್ವಾಮಿ, ಜೀವರತ್ನಂ, ಜಗದೀಶ್ ಕಮಟಗಿ, ರೇವಣ ಸಿದ್ದಪ್ಪ, ಮಧುರಚನ್ನಶಾಸ್ತ್ರಿ, ಮಧುಸೂದನ್, ಸೂರಿ ಬಂಗಾರು, ಚಂದ್ರು ದೇವಲಾಪುರ ಮತ್ತಿತರರಿದ್ದರು.
ಹೊಸಪೇಟೆಯಲ್ಲಿ ಶುಕ್ರವಾರ ವಿಜಯನಗರ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಯಿತು.