ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹಿರಿಯ ಶಾಸಕ
ಕನ್ನಡಪ್ರಭ ವಾರ್ತೆ ಹಳಿಯಾಳರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಹೀಗಿರುವಾಗ ಕಾಂಗ್ರೆಸ್ ಜನಪರ ಯೋಜನೆಗಳು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೇ ಕಾಂಗ್ರೆಸ್ ಕಾರ್ಯಕರ್ತರು ಗ್ರಾಪಂ, ತಾಪಂ ಮತ್ತು ಜಿಪಂ ಹಾಗೂ ಪೌರಸೇವಾ ಸಂಸ್ಥೆಗಳಲ್ಲಿ ಬಹುಮತದಿಂದ ಚುನಾಯಿತರಾಗಬೇಕು ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಭಾನುವಾರ ಪಟ್ಟಣದ ಪುರಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗಾಗಿ, ಬಿಎಲ್.ಎಗಳು ಮತ್ತು ಮುಖಂಡರು ಮತ್ತು ಜನಪ್ರತಿನಿಧಿಗಳಿಗಾಗಿ ಆಯೋಜಿಸಿದ ಎಸ್.ಐ.ಆರ್ ಮಾಹಿತಿ ಮತ್ತು ಪಕ್ಷದ ಸಂಘಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಕಾಂಗ್ರೆಸ್ ಬಹುಮತದಿಂದ ಚುನಾಯಿತರಾಗಬೇಕಾದರೇ ನಮ್ಮ ಪಕ್ಷ ಸಂಘಟನೆಯು ಬಲವಾಗಿರಬೇಕು. ಪಕ್ಷದ ಸಂಘಟನೆಯು ಹಗುರವಾದ ಮಾತಲ್ಲ, ಪುರುಷರು, ಮಹಿಳೆಯರು, ಯುವಸಮುದಾಯವು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸಂಘಟನೆಯಲ್ಲಿ ಸೇರ್ಪಡೆಯಾಗುವಂತೆ ನೋಡಬೇಕು ಎಂದರು.
ಕಾಂಗ್ರೆಸ್ ಪಕ್ಷ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಅವುಗಳ ಪ್ರಚಾರ ಮಾಡುವುದಾಗಲಿ ಅಥವಾ ಜನಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ. ಒಂದರ್ಥದಲ್ಲಿ ನಾವು ಕಾಂಗ್ರೆಸಿಗರು ಪ್ರಚಾರದಲ್ಲಿ ಹಿಂದಿದ್ದೇವೆ. ಚುನಾವಣೆ ಬಂದಾಗ ಮಾತ್ರ ಒಮ್ಮೇಲೆ ಕ್ರಿಯಾಶೀಲರಾಗುವ ಈ ಹಳೆಯ ಶೈಲಿಯನ್ನು ಕಾಂಗ್ರೆಸ್ ಪಕ್ಷದವರು ಬದಲಾಯಿಸಬೇಕು. ಮತದಾರರು ನಮಗೆ ನಂಬಬೇಕಾದರೇ, ಗೌರವ ನೀಡಬೇಕಾದರೇ ಕಾಂಗ್ರೆಸ್ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂದರು.
ಎಸ್.ಐ.ಆರ್ ಪ್ರಕ್ರಿಯೆಯು ಯಶಸ್ವಿಯಾಗಿ ನಡೆಯುವಂತೆ ಜಾಗರೂಕತೆ ವಹಿಸಬೇಕು. ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು, ಮತದಾನದ ಹಕ್ಕು ತಪ್ಪಿಸಿಕೊಂಡರೇ ಪ್ರಜಾಪ್ರಭುತ್ವದಲ್ಲಿ ನಮಗೆ ಗೌರವ ಸಿಗುವುದಿಲ್ಲ ಎಂದರು. ಪಕ್ಷದಲ್ಲಿನ ಎಲ್ಲಾ ಸಮಿತಿಗಳು ಕಾಲ ಕಾಲಕ್ಕೆ ಸಭೆ ನಡೆಸಬೇಕು, ವಿಶೇಷವಾಗಿ ಮಹಿಳೆಯರು ಮತ್ತು ಯುವಸಮುದಾಯವು ಪಕ್ಷದ ಕಾರ್ಯಕ್ರಮದಲ್ಲಿ ಸಭೆಯಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳುವಂತೆ ನೋಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ನಗರ ಘಟಕ ಅಧ್ಯಕ್ಷ ಶಂಕರ ಬೆಳಗಾಂವಕರ, ಮಹಿಳಾ ಘಟಕದ ಅಧ್ಯಕ್ಷೆ ಮಾಲಾ ಬೃಗಾಂಜಾ ಇದ್ದರು. ಪುರಸಭಾ ಮಾಜಿ ಅಧ್ಯಕ್ಷ ಅಜರ ಬಸರಿಕಟ್ಟಿ, ಮಾಜಿ ಉಪಾಧ್ಯಕ್ಷ ಫಯಾಜ್ ಶೇಖ್, ಮುಖಂಡರಾದ ವಿಷ್ಣು ಮಿಶಾಳೆ, ಸರ್ದಾರ ಗೂಡುಸಾಬ ಮಕಾನದಾರ, ಸುವರ್ಣ ಮಾದರ ಹಾಗೂ ಇತರರು ಇದ್ದರು.ಯುವಘಟಕದ ಅಧ್ಯಕ್ಷ ವೆಂಕಟೇಶ್ ಸಾಳುಂಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ದೇಮಾಣಿ ಶಿರೋಜಿ ಕಾರ್ಯಕ್ರಮ ನಿರೂಪಿಸಿದರು.