ಡಾ. ಜಿ.ಜಿ.ಹೆಗಡೆ ಬಾಳಗೋಡ ರಚಿಸಿದ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಒಂದು ಕೃತಿಯ ನಿಜವಾದ ಸಾಮಾಜಿಕತೆ ಇರುವುದು ನಮ್ಮೊಳಗಿನ ಮಾನವೀಯ ಪ್ರಜ್ಞೆ ಜಾಗೃತಗೊಳಿಸುವ ಅದರ ಸತ್ವದಲ್ಲಿ. ಜಿ.ಜಿ. ಹೆಗಡೆ ಬಾಳಗೋಡ ಅವರ ಜಾನಪದ ವೈವಿಧ್ಯ ಕೃತಿ ಅಕ್ಷರ ಪರಂಪರೆಗಿಂತ ಅನಾದಿಯಾದ ಜನಪದದ ಕುರಿತಾದ ವಿಪುಲವಾದ ಅರಿವನ್ನು ಪ್ರತಿಯೊಬ್ಬರಲ್ಲೂ ಮೂಡಿಸುತ್ತದೆ ಎಂದು ಸಾಹಿತಿ ಗಂಗಾಧರ ಕೊಳಗಿ ಹೇಳಿದರು.

ಸಮನ್ವಯ ಪ್ರಕಾಶನ ಹಾಗೂ ತಾಲೂಕಿನ ಕವಂಚೂರು ಮಲೆನಾಡು ಪ್ರೌಢಶಾಲೆಯ ಸಹಯೋಗದಲ್ಲಿ ಡಾ. ಜಿ.ಜಿ.ಹೆಗಡೆ ಬಾಳಗೋಡ ಅವರು ರಚಿಸಿದ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಜಾನಪದ ವೈವಿಧ್ಯ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಜನಪದ ನಮ್ಮೆಲ್ಲರ ಅಸ್ಮಿತೆ. ಭಾವನಾತ್ಮಕತೆ, ವೈಚಾರಿಕತೆ ಎರಡೂ ಸಮೃದ್ಧವಾಗಿರುವ ಜಾನಪದ ವ್ಯಕ್ತಿಶೀಲವಾದದ್ದಲ್ಲ. ಸಮಷ್ಠಿ ಪ್ರಜ್ಞೆಯ ವಿಸ್ತಾರ ಗುಣವುಳ್ಳದ್ದು. ನೆಲ ಮೂಲದ ಸಂಪರ್ಕವಿರುವ ಪ್ರತಿಯೊಬ್ಬರೂ ಆಹಾರ, ಉಡುಪು, ಮಾತನಾಡಲು ಬಳಸುವ ಭಾಷೆ,ಶಬ್ಧಗಳು ಸೇರಿದಂತೆ ನಿತ್ಯದ ಬದುಕಿನಲ್ಲಿ ಜಾನಪದ ಹಾಸುಹೊಕ್ಕಾಗಿದೆ. ದುರದೃಷ್ಟ ನಾವು ಅದನ್ನು ಗ್ರಹಿಸುತ್ತಿಲ್ಲ. ಜಿ.ಜಿ.ಹೆಗಡೆ ಬಾಳಗೋಡರವರ ಈ ಕೃತಿ ಶಿಸ್ತುಬದ್ದವಾದ, ಅಧ್ಯಯನಕ್ಕೆ ಅಗತ್ಯವಾದ ಕೃತಿ ಮಾತ್ರವಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ಆಧುನಿಕತೆಯ ಭ್ರಮೆಯಲ್ಲಿರುವ ಯುವ ಸಮುದಾಯಕ್ಕೆ ನೆಲಮೂಲವನ್ನು ನೆನಪಿಸುವಂಥದ್ದು ಎಂದರು.


ಜಿ.ಜಿ.ಹೆಗಡೆಯವರ ಜಾನಪದ ಸಂಭ್ರಮ ಕೃತಿ ಬಿಡುಗಡೆಗೊಳಿಸಿದ ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ಮಾತನಾಡಿ, ಮಾಖಿಕ ಪರಂಪರೆಯ ಮೂಲಕ ಬೆಳೆದುಬಂದ ಜಾನಪದ ಜೀವನದ ಮೌಲ್ಯಗಳನ್ನು ನಿರೂಪಿಸುತ್ತ, ಬದುಕಿನ ಎಲ್ಲ ನಿಜಗಳನ್ನು ಗಾದೆ, ಒಗಟು ಮುಂತಾದವುಗಳ ಮೂಲಕ ನಿರೂಪಿಸುತ್ತದೆ. ಜಿ.ಜಿ. ಹೆಗಡೆಯವರು ಅವನ್ನೆಲ್ಲ ಅತ್ಯಂತ ವಿಶಿಷ್ಠವಾಗಿ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರು.

ಭಾರತರತ್ನ ಡಾ. ಎಸ್.ರಾಧಾಕೃಷ್ಣನ್ ಕೃತಿಯ ಕುರಿತು ಭಾರತೀಯ ವಾಯುಸೇನೆಯ ನಿವೃತ್ತ ವಿಂಗ್ ಕಮಾಂಡರ್ ಗಜಾನನ ಹೆಗಡೆ ಮಾತನಾಡಿ, ಭಾರತೀಯ ತತ್ವಶಾಸ್ತ್ರ, ಕಾವ್ಯಗಳ ಕುರಿತು ವಿಶ್ವಕ್ಕೆ ಪರಿಚಯಿಸಿದವರು ರಾಧಾಕೃಷ್ಣನ್ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯಾಧ‍್ಯಾಪಕ ಶೈಲೇಶ್ ಕೊಯನ್ ಸಾಂದರ್ಭಿಕ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್, ಸಂಕಲ್ಪ ಟ್ರಸ್ಟ್‌ ನಿರ್ದೇಶಕ ಪಿ.ಬಿ. ಹೊಸೂರು, ಮಲೆನಾಡು ಪ್ರೌಢಶಾಲೆಯ ಮಾಜಿ ಮುಖ್ಯಾಧ್ಯಾಪಕ ಎಲ್.ಐ. ನಾಯ್ಕ ಗೋಳಗೋಡ ಮಾತನಾಡಿದರು.

ಕೃತಿಕಾರ ಡಾ. ಜಿ.ಜಿ. ಹೆಗಡೆ ಬಾಳಗೋಡ ಪ್ರಾಸ್ತಾವಿಕ ಮಾತನಾಡಿದರು. ಸಮನ್ವಯ ಪ್ರಕಾಶನದ ಸ್ವರ್ಣ ಲತಾ ಶಾನಭಾಗ ಸ್ವಾಗತಿಸಿದರು. ಪೃಥ್ವಿ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಕಿರಣ ನಿರೂಪಿಸಿದರು. ಶಿಕ್ಷಕಿ ಶೈಲಾ ವಂದಿಸಿದರು.