ಹನುಮಸಾಗರ: ದೇವಾಂಗ ಸಮಾಜ ಮನುಕುಲಕ್ಕೆ ವಸ್ತ್ರ ನೀಡುವ ಮೂಲಕ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ. ಸಮಾಜದ ಸಂಘಟನೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಇನ್ನಷ್ಟು ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಶ್ರೀಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜ, ಜಿಲ್ಲಾ ದೇವಾಂಗ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕುಷ್ಟಗಿ ತಾಲೂಕು ದೇವಾಂಗ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಇಂದಿನ ಯುಗದಲ್ಲಿ ಎಲ್ಲ ವ್ಯವಸ್ಥೆ ಆನ್‌ಲೈನ್ ಆಗುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಂಡು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಕೀರ್ತಿ ತರಬೇಕು ಎಂದರು.
ಸಮಾಜದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ₹5 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು. ದೇವಾಂಗ ಸಮಾಜದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಬೆಂಬಲ ಇರುತ್ತದೆ ಎಂದರು.ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಸಮಾಜ ಸಂಘಟಿತವಾದರೆ ಯಾವುದೇ ಗುರಿ ಸಾಧಿಸಬಹುದು. ಶಿಕ್ಷಣವೇ ಸಮಾಜದ ಸುಧಾರಣೆಯ ಪ್ರಮುಖ ಸಾಧನವಾಗಿದೆ ಎಂದರು.
ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷ ಶಿವಶಂಕರ ಕರಡಕಲ್ ಮಾತನಾಡಿ, ಜಿಲ್ಲಾಮಟ್ಟದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಅಪಾರ ಜ್ಞಾನ ಹಾಗೂ ಸಾಧನೆ ಮಾಡಿದ ಅನೇಕ ಮಂದಿ ಗುರುತಿಸಿ ಗೌರವಿಸಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆ ಹಾಗೂ ಸೌಲಭ್ಯ ಸಮಾಜದ ಪ್ರತಿಯೊಬ್ಬರೂ ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದರು.
ಮಾಜಿ ಜಿಪಂ ಸದಸ್ಯ ಕೆ.ಮಹೇಶ್ ಮಾತನಾಡಿ, ಇಂದಿನ ದಿನಗಳಲ್ಲಿ ನೇಕಾರರ ಬದುಕು ಸಂಕಷ್ಟದಲ್ಲಿದೆ. ಯುವಕರು ಉತ್ತಮ ಶಿಕ್ಷಣ ಪಡೆದು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಸಮಾಜದ ಅಗತ್ಯ ಕಾರ್ಯಗಳಿಗೆ ತಾವು ಸದಾ ಸಹಕಾರ ನೀಡುವುದಾಗಿ ತಿಳಿಸಿದರು.
ಬಸವರಾಜ ಹಳ್ಳೂರ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು, ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಾಧನೆ ಮಾಡಲು ಸ್ಪೂರ್ತಿ ನೀಡುತ್ತವೆ ಎಂದರು.ದೇವಾಂಗ ಸಮಾಜದ ಜಗದ್ಗುರು ದಯಾನಂದ ಪುರಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿದ್ಯೆ ಎಂಬುದು ಯಾರೂ ಕದಿಯಲಾಗದ ಆಂತರಿಕ ಶಕ್ತಿಯಾಗಿದ್ದು, ಅದೇ ವ್ಯಕ್ತಿಯ ನಿಜವಾದ ಸಂಪತ್ತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ನೆರವು ನೀಡುತ್ತಿರುವ ಕಾರ್ಯ ಶ್ಲಾಘನೀಯ. ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬರೂ ಸೇವಾಭಾವದಿಂದ ದುಡಿಯಬೇಕು. ಸಮಾಜದ ಬಂಧುಗಳು ಒಗ್ಗಟ್ಟಿನಿಂದ ಶ್ರಮಿಸಿದರೆ ಉನ್ನತ ಮಟ್ಟದ ಅಭಿವೃದ್ಧಿ ಸಾಧಿಸಬಹುದು ಎಂದರು.
ಜಿಲ್ಲಾ ಅಧ್ಯಕ್ಷ ಶಿವಶಂಕರ ಚೆನ್ನಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ, ನಿವೃತ್ತ ನೌಕರರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಶಿವಶಂಕರ ಕರಡಕಲ್, ನಾರಾಯಣಪ್ಪ ಕೊಳ್ಳಿ, ಶಂಕ್ರಪ್ಪ ಸಿನ್ನೂರ, ಶಿವನಗೌಡ ಪಾಟೀಲ, ವಿಶ್ವನಾಥ ಯಾಳಗಿ, ಚಂದ್ರಶೇಖರ ಬೆಟಗೇರಿ, ಧರ್ಮಜ್ಜ ಕುದರಿಮೊತಿ, ಬಸವಂತಪ್ಪ ಸಿಂಹಾಸನ, ಹನುಮಂತಗೌಡ ಗಾಳಿ, ಪ್ರಲ್ಹಾದಗೌಡ ಮೆದಿಕೇರಿ, ರಾಘವೇಂದ್ರ ಕೊಂಡಕುಂದಿ, ಕೆ.ಮಹೇಶ್, ಮೋಹನ್ ಹುಲಮನಿ, ಪಂಪಾಪತಿ ಅರಳಿಕಟ್ಟಿ, ವಿರೇಶ ಅರಳಿಕಟ್ಟಿ, ಶ್ರೀನಿವಾಸ ಕಂಟ್ಲಿ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿ, ಪ್ರತಿಭಾವಂತ ವಿದ್ಯಾರ್ಥಿ ಹಾಗೂ ಅಪಾರ ಸಂಖ್ಯೆಯ ಸಮಾಜದ ಬಾಂಧವರು ಇತರರು ಇದ್ದರು.