ಆದಾಪುರ ಶಾಲೆಗೆ ಕೇವಲ ಒಬ್ಬ ಸರ್ಕಾರಿ ಶಿಕ್ಷಕರು ಇದ್ದಾರೆ. ಇಬ್ಬರು ಅತಿಥಿ ಶಿಕ್ಷಕರು ಇದ್ದರೂ ಪಾಠ ಮಾಡುವುದಕ್ಕೆ ಕೊಠಡಿ ಇಲ್ಲದಂತಾಗಿದೆ

ರಾಮಮೂರ್ತಿ ನವಲಿ ಗಂಗಾವತಿ

ಶಿಕ್ಷಕ, ಕೊಠಡಿ ಕೊರತೆ ಮಧ್ಯೆ 1ರಿಂದ 7ನೇ ತರಗತಿ ವರೆಗೆ ನಡೆಯುತ್ತಿರುವ ಕನಕಗಿರಿ ತಾಲೂಕಿನ ಆದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡವಾಡದಂತಾಗಿದೆ.

ನವಲಿ ಜಿಪಂ ಕ್ಷೇತ್ರದ ಪ್ರಮುಖ ಗ್ರಾಮವಾಗಿರುವ ಆದಾಪುರದಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದೆ. ಈ ಸಂಖ್ಯೆಯ ಅನುಗುಣವಾಗಿ ಈ ಹಿಂದೆ ಇದ್ದ ಕಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮಾಡಲಾಗಿದೆ. 1ರಿಂದ 7ನೇ ತರಗತಿ ವರೆಗೆ ಶಿಕ್ಷಣ ಪಡೆಯಲು ಆದಾಪುರ, ಬೈರಾಪುರ ಗ್ರಾಮಗಳಿಂದ ಸುಮಾರು 96 ವಿದ್ಯಾರ್ಥಿಗಳು ಬರುತ್ತಾರೆ.

ಒಂದೇ ಕೊಠಡಿ: ಈ ಶಾಲೆಗೆ ಕೇವಲ ಒಂದೇ ಕೊಠಡಿ ಇದೆ. ಪ್ರತಿ ತರಗತಿಗೂ ಒಂದೊಂದು ಕೊಠಡಿ ಬೇಕಾಗುತ್ತದೆ. ಆದರೆ ಇಲ್ಲಿ ಕೇವಲ ಒಂದೇ ಕೊಠಡಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕುತ್ತಿದ್ದು, ವಿದ್ಯಾರ್ಥಿಗಳಿಗೆ ಯಾವ ತರಗತಿಯ ಪಾಠ ಹೇಳುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.

ಒಬ್ಬರೇ ಕಾಯಂ ಶಿಕ್ಷಕ: ಆದಾಪುರ ಶಾಲೆಗೆ ಕೇವಲ ಒಬ್ಬ ಸರ್ಕಾರಿ ಶಿಕ್ಷಕರು ಇದ್ದಾರೆ. ಇಬ್ಬರು ಅತಿಥಿ ಶಿಕ್ಷಕರು ಇದ್ದರೂ ಪಾಠ ಮಾಡುವುದಕ್ಕೆ ಕೊಠಡಿ ಇಲ್ಲದಂತಾಗಿದೆ. ಇದ್ದ ಶಿಕ್ಷಕಿಯನ್ನು ಈಗ ಬದಲಾಯಿಸುವಂತೆ ಗ್ರಾಮಸ್ಥರು ಶಿಕ್ಷಣ ಇಲಾಖೆಯ ಮೊರೆ ಹೋಗಿದ್ದಾರೆ.

ಮಳೆ ಬಂದರೆ ಗುಡಿಯಲ್ಲಿ ಪಾಠ: ಮಳೆ ಬಂದರೆ ಇಲ್ಲಿಯ ಶಾಲೆಯ ಮಕ್ಕಳು ಗುಡಿ, ಗುಂಡಾರದಲ್ಲಿ ಪಾಠ ಹೇಳುವ ಪರಿಸ್ಥಿತಿ ಒದಗಿದೆ. ಈಗಾಗಲೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಕೊಠಡಿಯ ಹೊರಗೆ ಕುಳಿತು ಪಾಠ ಕೇಳುವಂತಾಗಿದೆ. ಯಾವ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂದು ತಿಳಿಯದಂತಾಗುತ್ತದೆ.

ಶಿಕ್ಷಣ ಇಲಾಖೆಯವರು ಗಮನ ಹರಿಸಿದರೆ ದೇಶದ ಭಾವಿ ಪ್ರಜೆಗಳಾಗಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಕ್ತಿ ನೀಡಿದಂತಾಗುತ್ತದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಕೊಪ್ಪಳ ಜಿಲ್ಲೆಯ ಆದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ ಕುರಿತು ವಿಚಾರಣೆ ನಡೆಸಲಾಗುತ್ತದೆ. ಕೊಠಡಿ, ಶಿಕ್ಷಕರ ಬಗ್ಗೆ ಗ್ರಾಮಸ್ಥರ ಅಸಮಾಧಾನ, ಕಟ್ಟಡ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೊಪ್ಪಳ ಡಿಡಿಪಿಐ ಸೋಮಶೇಖರಗೌಡ ತಿಳಿಸಿದ್ದಾರೆ.

ಆದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಟ್ಟಡ ಇಲ್ಲದ ಕಾರಣ ವಿದ್ಯಾರ್ಥಿಗಳು ತೊಂದರೆ ಪಡುತ್ತಿದ್ದಾರೆ. ಮಕ್ಕಳಿಗೆ ಸರಿಯಾದ ಪಾಠ ಇಲ್ಲದಂತಾಗಿದೆ. ವಿದ್ಯಾರ್ಥಿಗಳನ್ನು ಗಿಡ, ಮರಗಳ ಕೆಳಗೆ ಕೂಡಿಸಿ ಪಾಠ ಹೇಳುತ್ತಾರೆ, ಇಲ್ಲಿಯ ಮುಖ್ಯೋಪಾಧ್ಯಾಯರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಕುರಿತು ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಆದಾಪುರ ಎಸ್‌ಡಿಎಂಸಿ ಅಧ್ಯಕ್ಷ ಫಕೀರಪ್ಪ ತಿಳಿಸಿದ್ದಾರೆ.