ಕನಕಗಿರಿ: ಭಾರತದ ಕಾನೂನಿಗೆ ಇರುವ ಶಕ್ತಿ ಜಗತ್ತಿನ ಯಾವ ದೇಶಕ್ಕೂ ಇಲ್ಲ ಎಂದು ನ್ಯಾಯವಾದಿ ಮಾಬುಹುಸೇನ್‌ ಗುಡಿಹಿಂದಲ ಹೇಳಿದರು.

ಅವರು ಪಟ್ಟಣದ ಪಿಂಜಾರ ಓಣಿಯಲ್ಲಿ 9 ಮತ್ತು 10 ನೇ ವಾರ್ಡಿನ ಕೌಡೇಪೀರ ಯುವಕರ ಕಮಿಟಿಯಿಂದ ಮೊಹರಂ ಹಬ್ಬದ ಪ್ರಯುಕ್ತವಾಗಿ ಕಾನೂನು ಅರಿವು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ವಿಶ್ವದ ಅನೇಕ ರಾಷ್ಟ್ರಗಳನ್ನು ಅನುಕರಣೆ ಮಾಡಿದಾಗ ಭಾರತದ ಕಾನೂನು ವಿಭಿನ್ನವಾಗಿದೆ. ಈ ಕಾನೂನು ಜಗತ್ತಿನ ಅತಿದೊಡ್ಡದಾಗಿದೆ. ವಿಶ್ವದ ಅಗ್ರಗಣ್ಯ ಸ್ಥಾನದಲ್ಲಿರುವ ಕಾನೂನು ನಮ್ಮದಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ನಡೆಯುತ್ತಿರುವ ಅನಾಚಾರ, ಪೈಶಾಚಿಕ ಕೃತ್ಯ ತಡೆಯುವ ನಿಟ್ಟಿನಲ್ಲಿ ಕಾನೂನನ್ನು ರೂಪಿಸಬೇಕಾಗಿದೆ. ನಮ್ಮ ಹಳ್ಳಿ, ಪಟ್ಟಣಗಳಲ್ಲಿ ಜಾತಿ, ಧರ್ಮ ಎಲ್ಲವನ್ನೂ ಮೀರಿ ಎಲ್ಲ ವರ್ಗದವರು ಕೂಡಿ ಬಾಳಬೇಕಾಗಿದೆ.ಈ ದೀಶೆಯಲ್ಲಿ ಯಾರೂ ಯಾವತ್ತೂ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳಿಗೆ ಹೋಗದಂತೆ ಆಯಾ ಸಮಸ್ಯೆ ಅಲ್ಲೆ ಪರಿಹರಿಸಲು ಹಿರಿಯರು ಮುಂದಾದರೆ ನಮ್ಮ ಊರು, ನಗರಗಳಲ್ಲಿ ವಾಸಿಸುವ ಜನ ನಿರ್ಭಿತಿಯಿಂದ ಬದುಕಲು ಸಾಧ್ಯವಾಗಲಿದೆ ಎಂದರು.

ಇದಕ್ಕೂ ಮೊದಲು ಪೊಲೀಸ್ ಪೇದೆ ಸಿದ್ರಾಮಪ್ಪ ಕೊಪ್ಪಳ ಮಾತನಾಡಿ, ಕಾನೂನು ರಕ್ಷಣೆಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಸಮಾಜ ಘಾತುಕ ಶಕ್ತಿ, ಕಾನೂನು ಬಾಹಿರ ಚಟುವಟಿಕೆಗಳು ನಡೆಯುವುದು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಕಾನೂನಿನ ಪಾಲನೆ ಹಾಗೂ ಸುರಕ್ಷತೆಗೆ ನಮ್ಮ ಇಲಾಖೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಅಲ್ಲದೇ ಪೊಲೀಸ್ ಇಲಾಖೆ ಜನಸ್ನೇಹಿಯಾಗಿರುವುದರಿಂದ ಹಲವು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ. ಮೊಹರಂ ಹಬ್ಬದಲ್ಲಿ ಸಮಾಜಿಕ ಕಳಕಳಿ ಇಟ್ಟುಕೊಂಡು ಯುವಕರು ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಈ ವೇಳೆ ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತಹುಸೇನ್, ಪ್ರಾಕೃಪಸ ಸಂಘದ ಅಧ್ಯಕ್ಷ ಬಿ. ಕನಕಪ್ಪ, ಜಿಪಂ ಮಾಜಿ ಸದಸ್ಯ ವಿರೇಶ ಸಮಗಂಡಿ, ಹನುಮೇಶ ನಾಯಕ, ಗಂಗಾಧರಸ್ವಾಮಿ, ಸಣ್ಣ ಕನಕಪ್ಪ, ಖಾಜಸಾಬ್‌ ಗುರಿಕಾರ, ಹುಲುಗಪ್ಪ ವಾಲೇಕಾರ್, ಶರಣಪ್ಪ ಭತ್ತದ, ಗಾಯಕ ಗಣೇಶ ಕಳ್ಳಿ ಸೇರಿದಂತೆ ಇತರರಿದ್ದರು.