ಶಿಕ್ಷಣ ಕ್ಷೇತ್ರವನ್ನು ಆದ್ಯತೆ ಕ್ಷೇತ್ರವಾಗಿ ಪರಿಗಣಿಸಿ: ಡಾ.ಎಸ್.ಆರ್.ಹರೀಶ್ ಆಚಾರ್ಯ

| Published : May 24 2024, 12:45 AM IST / Updated: May 24 2024, 12:46 AM IST

ಶಿಕ್ಷಣ ಕ್ಷೇತ್ರವನ್ನು ಆದ್ಯತೆ ಕ್ಷೇತ್ರವಾಗಿ ಪರಿಗಣಿಸಿ: ಡಾ.ಎಸ್.ಆರ್.ಹರೀಶ್ ಆಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಅದು ಇನ್ನೂ ಜಟಿಲವಾಗುತ್ತ ಹೋಗುತ್ತಿದೆ. ಬಗೆಹರಿಸುವ ಪ್ರಯತ್ನ ವಾಗುತ್ತಿಲ್ಲ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿಕ್ಷಕರ ಸ್ವಾಭಿಮಾನ ಹಾಗೂ ವೃತ್ತಿ ಗೌರವದ ಪಾವಿತ್ರ್ಯತೆಗೆ ಧ್ವನಿಯಾಗುವ ದೃಷ್ಟಿಯಿಂದ ನಾನು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಡಾ.ಎಸ್.ಆರ್. ಹರೀಶ್ ಆಚಾರ್ಯ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿಕ್ಷಕರ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಅದು ಇನ್ನೂ ಜಟಿಲವಾಗುತ್ತ ಹೋಗುತ್ತಿದೆ. ಬಗೆಹರಿಸುವ ಪ್ರಯತ್ನ ವಾಗುತ್ತಿಲ್ಲ. ಖಾಸಗಿ ಶಾಲಾ ಶಿಕ್ಷಕರು ಅನಿಶ್ಚತೆ ತೂಗುಗತ್ತಿಯಲ್ಲಿದ್ದಾರೆ. ಸೇವಾ ಭದ್ರತೆ ಮರಿಚಿಕೆಯಾಗಿದೆ. ಪ್ರೌಢಶಾಲೆಯಲ್ಲಿ ಶೇ.20, ಪದವಿಪೂರ್ವ ಕಾಲೇಜಿನಲ್ಲಿ ಶೇ.40 ಡಿಗ್ರಿ ಕಾಲೇಜಿನಲ್ಲಿ ಶೇ. 60, ವಿಶ್ವವಿದ್ಯಾಲಯದಲ್ಲಿ ಶೇ.80ರಷ್ಟು ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಯಾವಾಗ ಅವರನ್ನು ಕೆಲಸದಿಂದ ತೆಗೆಯುತ್ತಾರೆ ಎಂಬ ಆತಂಕದಲ್ಲೇ ಇದ್ದಾರೆ. ತಾಂತ್ರಿಕ ದೋಷ ಎಂಬ ಸಬೂಬು ಹೇಳಿ ಸಾವಿರಾರು ಶಿಕ್ಷಕರಿಗೆ ಬಡ್ತಿ ಶಾಪವಾಗಿ ಪರಿಣಮಿಸಿದೆ. ಸೇವಾ ನಿಯಮಗಳ ಪ್ರಕಾರ ವೇತನ ನೀಡುತ್ತಿಲ್ಲ. ಅತ್ತು ಕರೆದು ಲಾಭಿ ಮಾಡಿ ಭತ್ಯೆ ಪಡೆಯುವ ದುಸ್ಥಿತಿ ಇದೆ. ಶಿಕ್ಷಣ ಕ್ಷೇತ್ರವನ್ನು ಆದ್ಯತೆ ಕ್ಷೇತ್ರವಾಗಿ ಪರಿಗಣಿಸಬೇಕು ಎಂದರು.

ಇದು ಪಕ್ಷಾತೀತ ಚುನಾವಣೆ. ಇಲ್ಲಿ ಯಾವುದೇ ಪಕ್ಷದ ಚಿಹ್ನೆ ಇರುವುದಿಲ್ಲ. ಶಿಕ್ಷಕರ ಕ್ಷೇತ್ರದ ಪ್ರಾತಿನಿಧ್ಯಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ಅದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಶಿಕ್ಷಕರ ಮತವನ್ನು ಕೂಡ ಹಣ ಹೆಂಡದಿಂದ ಖರೀದಿಸಬಹುದು ಎಂಬ ಮಾನಸಿಕತೆ ಕೆಲವು ಅಭ್ಯರ್ಥಿಗಳಲ್ಲಿ ಬೆಳೆದಿದೆ. ಅದು ನಿಜ ಕೂಡ.

ಕಳೆದ ಎರಡು ದಶಕಗಳಿಂದ ವಿದ್ಯಾರ್ಥಿ, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿಗಳ ಮತ್ತು ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿ ನಿರಂತರ ನಾಯಕತ್ವ ನೀಡಿರುತ್ತೇನೆ. ಅಧ್ಯಾಪಕರೊಂದಿಗೆ ನಿರಂತರ ನಿಕಟ ಸಂಪರ್ಕ ಸಾಧಿಸಿದ್ದೇನೆ. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯನಾಗಿ ಎರಡು ಅವಧಿಯಲ್ಲಿ ಶಿಕ್ಷಣ ರಂಗ ಹಾಗೂ ಶಿಕ್ಷಕ ಸಮುದಾಯದ ಧ್ವನಿಯಾಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಂಡು ಪರೀಕ್ಷಾ ಕಾರ್ಯ ಹಾಗೂ ಮೌಲ್ಯ ಮಾಪನ ವ್ಯವಸ್ಥೆ ಲೋಪಗಳ ಬಗ್ಗೆ, ಮೌಲ್ಯಮಾಪನ ಸಂಭಾವನೆ ಪಾವತಿ ಬಗ್ಗೆ, ಅತಿಥಿ ಉಪನ್ಯಾಸಕರ ವೇತನ ಬಾಕಿ ಹಾಗೂ ಇನ್ನಿತರ ಯಾವುದೇ ರೀತಿಯ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ ಇಂದಿಗೂ ಸಮರ್ಪಕವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿರುತ್ತೇನೆ ಎಂದರು.

ಶಿಕ್ಷಣ ರಂಗದ ಮಹತ್ವ ಮತ್ತು ಶಿಕ್ಷಕ ಸಮುದಾಯದ ಹಿತಕ್ಕಾಗಿ ಈ ಕ್ಷೇತ್ರ ಗಟ್ಟಿಗೊಳಿಸಬೇಕಾಗಿದೆ. ಈ ಹಿನ್ನೆಲೆ ನನ್ನನ್ನು ಶಿಕ್ಷಕರ ಧ್ವನಿಯಾಗಿ ಪರಿಗಣಿಸಿ ಶಿಕ್ಷಕ ಸಮುದಾಯದ ಪ್ರತಿನಿಧಿಯಾಗಿ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲ ವಾಗೀಶ್ ಉಪಸ್ಥಿತರಿದ್ದರು.