ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಶಿಕ್ಷಕರಿಗೆ ಶೋಷಣೆ: ನಾರಾಯಣಸ್ವಾಮಿ

| Published : May 24 2024, 12:45 AM IST

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಶಿಕ್ಷಕರಿಗೆ ಶೋಷಣೆ: ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ರಾಜ್ಯದ ಶಿಕ್ಷಣ ಸಚಿವರು ಕನ್ನಡ ಭಾಷೆಯಲ್ಲಿ ಪಂಡಿತರು, ವಿಷಯ ಜ್ಞಾನಿಗಳು, ಎಲ್ಲರೂ ತಲೆತೂಗುವಂತೆ ಕನ್ನಡ ಮಾತನಾಡುವವರು. ಇಂತಹ ಶಿಕ್ಷಣ ಸಚಿವರನ್ನು ಪಡೆದಿರುವ ನಾವೇ ಧನ್ಯರು ಎಂದು ರಾಜ್ಯದ ಶಿಕ್ಷಣ ಸಚಿವ ಮಧುಬಂಗಾರಪ್ಪನವರನ್ನು ಛೇಡಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಲೆಲ್ಲಾ ಬರಗಾಲ ಮತ್ತು ಶಿಕ್ಷಕರಿಗೆ ಶೋಷಣೆ ಗ್ಯಾರಂಟಿ ಎಂದು ಹಾಲಿ ವಿಧಾನ ಪರಿಷತ್ ಸದಸ್ಯ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಲೇವಡಿ ಮಾಡಿದರು.

ಪಟ್ಟಣದ ವಿದ್ಯಾರಣ್ಯ ಪ್ರೌಢಶಾಲಾ ಆವರಣದಲ್ಲಿ ಶಿಕ್ಷಕರಲ್ಲಿ ಮತಯಾಚಿಸಿದ ಅವರು, ಕಾಂಗ್ರೆಸ್ ಸರ್ಕಾರ ಬಂದು ಈಗಷ್ಟೇ ಒಂದು ವರ್ಷವಾಗಿದೆ. ಈ ಸರ್ಕಾರ ಹಾಗೂ ಶಿಕ್ಷಣ ಸಚಿವರು ಕೊಡುತ್ತಿರುವ ಕಿರುಕುಳವನ್ನು ತಾಳಲಾರದೇ ಶಿಕ್ಷಕರು ಸರ್ಕಾರ ಬೀಳಲೆಂದು ಕಾಯುತ್ತಿದ್ದಾರೆ ಎಂದು ಹೇಳಿದರು.

ಈ ರಾಜ್ಯದ ಶಿಕ್ಷಣ ಸಚಿವರು ಕನ್ನಡ ಭಾಷೆಯಲ್ಲಿ ಪಂಡಿತರು, ವಿಷಯ ಜ್ಞಾನಿಗಳು, ಎಲ್ಲರೂ ತಲೆತೂಗುವಂತೆ ಕನ್ನಡ ಮಾತನಾಡುವವರು. ಇಂತಹ ಶಿಕ್ಷಣ ಸಚಿವರನ್ನು ಪಡೆದಿರುವ ನಾವೇ ಧನ್ಯರು ಎಂದು ರಾಜ್ಯದ ಶಿಕ್ಷಣ ಸಚಿವ ಮಧುಬಂಗಾರಪ್ಪನವರನ್ನು ಛೇಡಿಸಿದರು. ಕನ್ನಡದ ಗಂಧವೇ ಗೊತ್ತಿಲ್ಲದವರು ನಮ್ಮ ಶಿಕ್ಷಣ ಸಚಿವರಾಗಿರುವುದು ನಮ್ಮೆಲ್ಲರ ದುರ್ದೈವ ಎಂದು ವಿಷಾಧಿಸಿದರು.

ಕಳೆದ ಮೂರು ಬಾರಿ ನಾನು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ್ದೇನೆ. ನನ್ನನ್ನು ರಾಜಕೀಯವಾಗಿ ದೂರಬೇಕೇ ವಿನಃ ವೈಯಕ್ತಿಕವಾಗಿ ದೂರಲು ಸಾಧ್ಯವೇ ಇಲ್ಲ. ನಾನು ಶಿಕ್ಷಕರ ಕ್ಷೇಮಾಭಿವೃದ್ಧಿಗಾಗಿ ಸಾಕಷ್ಟು ಹೋರಾಟಗಳನ್ನು ನಡೆಸಿದ್ದೇನೆ. ಗೆಲುವನ್ನೂ ಕಂಡಿದ್ದೇನೆ. ನನ್ನನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡ ಎಲ್ಲಾ ಶಿಕ್ಷಕರ ಸಮಸ್ಯೆಗಳನ್ನೂ ಕಾನೂನು ರೀತ್ಯ ಪರಿಹರಿಸಿದ್ದೇನೆ. ಹಾಗಾಗಿ ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದವನ್ನು ಬೇಡುತ್ತಿದ್ದೇನೆ. ದಯಮಾಡಿ ಈ ಬಾರಿಯೂ ನನ್ನನ್ನು ಹರಸಬೇಕೆಂದು ವೈ.ಎ.ನಾರಾಯಣ ಸ್ವಾಮಿ ಶಿಕ್ಷಕರಲ್ಲಿ ಮನವಿ ಮಾಡಿಕೊಂಡರು.

ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಬಗ್ಗೆ ಕೇವಲ ಹೊಗಳಿಕೆಯ ಮಾತುಗಳು ಕೇಳಿಬರುತ್ತಿವೆಯೇ ವಿನಃ, ಅವರ ಶೈಕ್ಷಣಿಕ ಸೇವೆ ಏನೇನೂ ಇಲ್ಲ,

ವೈ.ಎ.ನಾರಾಯಣಸ್ವಾಮಿಯವರ ಶೈಕ್ಷಣಿಕ ಕೊಡುಗೆ ಏನು ಎಂಬುದು ರಾಜ್ಯದ ಶಿಕ್ಷಕರಿಗೆಲ್ಲ ಗೊತ್ತಿದೆ. ಯಾರ ದ್ವೇಷಿಯೂ ನಾನಲ್ಲ, ಭ್ರಷ್ಟನಲ್ಲ, ಲಂಚಕೋರನಲ್ಲ. ಒಳ್ಳೆಯ ಕೆಲಸಗಳಿಂದ ಹಾಗೂ ಪ್ರೀತಿ, ವಿಶ್ವಾಸದಿಂದ ಕ್ಷೇತ್ರದ ಶಿಕ್ಷಕರ ಮನಗೆದ್ದಿದ್ದೇನೆ. ಹಾಗಾಗಿ ಈ ಬಾರಿಯೂ ನಿಮ್ಮೆಲ್ಲರ ಬೆಂಬಲ ನನಗಿದೆ ಎಂಬ ವಿಶ್ವಾಸವಿದೆ ಎಂದರು. ಬಿಜೆಪಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಖಾಸಗಿ ಅನುದಾನಿತ ಪ್ರೌಢಶಾಲೆಗಳ ಸಂಘದ ತಾಲೂಕು ಕಾರ್ಯದರ್ಶಿ ಟಿ.ಆರ್.ಜಯಣ್ಣ, ನಿವೃತ್ತ ಉಪ ಪ್ರಾಂಶುಪಾಲ ನಾಗರಾಜಯ್ಯ ಸೇರಿ ಹಲವಾರು ಶಿಕ್ಷಕರು ಭಾಗವಹಿಸಿದ್ದರು.