ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಂಚಿಕೆ ಆದೇಶದಲ್ಲಿ ಪಿತೂರಿ ನಡೆದಿದ್ದು ಮಾದಿಗ ಸಮುದಾಯಕ್ಕೆ ಬರೆದಿರುವ ಮರಣ ಶಾಸನವಾಗಿದೆ. ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಕರ್ನಾಟಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್. ಅರುಣ್ ಕುಮಾರ್ ಆರೋಪಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯವಸ್ಥಿತವಾಗಿ ಪಿತೂರಿ ನಡೆಸಿಯೇ ಪೆರಿಯಾ, ಪೆರಿಯನ್ ಮತ್ತು ಮೊಗೆರಾ ಸಮುದಾಯಗಳನ್ನು ಒಳ ಮೀಸಲಾತಿ ಹಂಚಿಕೆಯಲ್ಲಿ ಪ್ರವರ್ಗ-ಬಿ (ಹೊಲೆಯ ಹಾಗೂ ಇನ್ನಿತರೆ ಬಲಗೈ ಸಮುದಾಯಗಳು)ಗೆ ಸೇರಿಸಲಾಯಿತು ಎಂದು ಕಿಡಿಕಾರಿದರು.
ನ್ಯಾ. ನಾಗಮೋಹನ್ ದಾಸ್ ಆಯೋಗವು ಸಮೀಕ್ಷೆಯಲ್ಲಿ ಮೂಲ ಜಾತಿ ಹೇಳಿಕೊಳ್ಳದೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ (ಎಕೆ, ಎಡಿ ಮತ್ತು ಎಎ) ಎಂದು ಬರೆಸಿರುವ ಸುಮಾರು 4.74 ಲಕ್ಷ ಜನರನ್ನು ಒಂದು ಗುಂಪು ಮಾಡಿ, ಶೇ. 1ರಷ್ಟು ಒಳ ಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ, ಅಲ್ಲಿಯೂ ಪಿತೂರಿ ನಡೆಸಿದ್ದರಿಂದ ಎಕೆ, ಎಡಿ ಮತ್ತು ಎಎ ಜನರನ್ನು ಅರ್ಧದಷ್ಟು ಪ್ರವರ್ಗ- ಎ (ಮಾದಿಗ ಮತ್ತು ಇನ್ನಿತರೆ ಎಡಗೈ ಸಮುದಾಯಗಳು) ಮತ್ತು ಇನ್ನರ್ಧದಷ್ಟು ಪ್ರವರ್ಗ- ಬಿಗೆ ಸೇರ್ಪಡಿಸಿ ತಲಾ ಶೇ. 6ರಷ್ಟು ಒಳ ಮೀಸಲಾತಿ ಹಂಚಿಕೆ ಮಾಡಿದೆ ಎಂದು ಅವರು ವಿವರಿಸಿದರು.ಅಷ್ಟು ಮಾತ್ರವಲ್ಲದೆ ಹೊಲೆಯ ಗುಂಪಿನಲ್ಲಿರುವ (ಪ್ರವರ್ಗ-ಬಿ) ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರದ ವ್ಯಕ್ತಿ, ಸರ್ಕಾರದ ಸವಲತ್ತುಗಳನ್ನು ಮಾದಿಗರ ಗುಂಪಿನಲ್ಲಿ (ಪ್ರವರ್ಗ-ಎ) ಯೂ ಪಡೆದುಕೊಳ್ಳಬಹುದು ಎಂದು ಆದೇಶಿಸುವ ಮೂಲಕ ರಾಜ್ಯ ಸರ್ಕಾರ ಮಾದಿಗ ಸಮುದಾಯವನ್ನು ಕಡೆಗಣಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಿ ಎಸ್‌ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ, ವಿದ್ಯಾರ್ಥಿಗಳ ಸಭೆಯಲ್ಲಿ ಎಕೆ, ಎಡಿ ಮತ್ತು ಎಎ ನಲ್ಲಿರುವ ಹೊಲೆಯರು, ಮಾದಿಗರ ಗುಂಪಿನಲ್ಲೂ ಅರ್ಜಿ ಹಾಕಿ, ಅರ್ಜಿ ಹಾಕುವುದು ಗುಟ್ಟಾಗಿರಲಿ ಎಂದು ಹೇಳಿಕೊಡುತ್ತಾರೆ ಎಂದರೆ ಅರ್ಥವೇನು? ಇದನ್ನು ನೋಡಿಕೊಂಡು ಸರ್ಕಾರ ಏನೂ ಮಾಡುತ್ತಿದೆ? ಸತ್ತಿದೆಯೇ ಎಂದು ತೀವ್ರ ಅಸಮಾದಾನ ಹೊರಹಾಕಿದರಲ್ಲದೆ ಎಕೆ, ಎಡಿ ಮತ್ತು ಎಎ ನಲ್ಲಿರುವ ಹೊಲೆಯರು ಸಹ ಮಾದಿಗರ ಗುಂಪಿನಲ್ಲಿ ಒಳ ಮೀಸಲಾತಿ ಪಡೆದುಕೊಳ್ಳಬಹುದು ಎಂದಾದರೆ ಯಾವ ಅರ್ಥದಲ್ಲಿ ಮಾದಿಗರಿಗೆ ಶೇ. 6ರಷ್ಟು ಒಳ ಮೀಸಲಾತಿ ಕೊಟ್ಟಿದ್ದಾರೆ. ಮಾದಿಗರಿಗೆ ಹಿಂದೂ ಸಮಾಜದಿಂದಲ್ಲಾ ಹೊಲೆಯರಿಂದಲೇ ದೌರ್ಜನ್ಯವಾಗಿದೆ ಎಂದು ಹರಿಹಾಯ್ದರು.ಅ. 12 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ: ಮಾದಿಗರ ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿಯ ಬಿ.ಆರ್. ಭಾಸ್ಕರ್ ಪ್ರಸಾದ್ ಮಾತನಾಡಿ, ಟಿ. ನರಸೀಪುರದಲ್ಲಿರುವ ಎನ್. ರಾಚಯ್ಯ ಅವರ ಸಮಾಧಿ ಸ್ಥಳದಿಂದಲೇ ಅ. 12 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು. ಅಲ್ಲಿಂದ ಸಿಎಂ, ಸಮಾಜಕ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಕಾನೂನು ಸಚಿವರ ಮನೆಯ ಹೋಗಿ ನ್ಯಾಯ ಸಿಗುವರೆಗೂ ಹೋರಾಡುತ್ತೇವೆ. ಒಳ ಮೀಸಲಾತಿ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿದ ಇದ್ದಲ್ಲಿ ಪ್ರಾಣ ತ್ಯಾಗಕ್ಕೂ ಸಿದ್ದರಿರುವುದಾಗಿ ಅವರು ಎಚ್ಚರಿಕೆ ನೀಡಿದರು.
ಚಂದ್ರಶೇಖರಯ್ಯ ವಿದ್ಯಾರ್ಥಿಗಳನ್ನು ಕ್ರಿಮಿನಲ್ ಗಳಾಗಿ ಮಾಡುತ್ತಿದ್ದಾರೆ. ಅಲ್ಲದೆ ಮಾದಿಗ ಎಂದು ಜಾತಿ ಪ್ರಮಾಣ ಪತ್ರವನ್ನು ನೀಡದಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ ಎಂದರು.ಕರ್ನಾಟಕ ಮಾದಿಗರ ಸಂಘದ ಪಿ. ನಾರಾಯಣ, ಇಂದ್ರಮ್ಮ ಇದ್ದರು.